ಕಾಕೊಳು ರಾಮಯ್ಯ ಕಂಡಂತೆ ದೊಂಬಿದಾಸ

ಬದುಕನ್ನರಸಿ ಗುಳೆ ಹೊರಟ ದೊಂಬಿದಾಸರ ಮೇಳ ಇದೇ ಸೂರ್ಯ ಆಗ ಪಶ್ಚಿಮದಿಕ್ಕಿನತ್ತ ಪಯಣಿಸುತ್ತಿದ್ದ. ದೊಂಬಿದಾಸರ ಮೇಳದ ಗುಂಪೊಂದು ತಮ್ಮ ಸಾಮಾನು ಸರಂಜಾಮುಗಳ ಸಮೇತ ಗುಡ್ಡವಿಳಿದು ಬರುತ್ತಿತ್ತು. ಗುಡ್ಡದ ಹಿನ್ನೆಲೆಯಲ್ಲಿ, ಸೂರ್ಯನ ಬೆಳಕಿನಲ್ಲಿ ನಡೆದು ಬರುತ್ತಿದ್ದ ಮೇಳದವರ ಗುಂಪು ಚಿತ್ರದಲ್ಲಿ ಬರೆದ ನೆರಳಿನಂತೆ ಕಾಣಿಸುತ್ತಿತ್ತು.

ಮುನಿಯಪ್ಪನ ಭುಜದಮೇಲೆ, ಕಾವಡಿಯಲ್ಲಿ ನಾಟಕಕ್ಕೆ ಬಳಸುತ್ತಿದ್ದ ಒಂದೇಒಂದು ಬಣ್ಣಗೆಟ್ಟ ಪರದೆ ಭುಜಕೀರ್ತಿ ಕಿರೀಟಗಳು ಸಾಮ್ರಾಜ್ಯವನ್ನು ಕಳೆದು ಕೊಂಡ ಚಕ್ರವರ್ತಿಯೊಬ್ಬ ನಿರಾಶರಾಗಿ ಮಲಗಿರುವಂತೆ ಕಾಣಿಸುತ್ತಿದ್ದವು.

ಅವುಗಳಿಗೆ ಜೀವಬರುತ್ತಿದ್ದುದು ರಾತ್ರಿ ಹತ್ತುಗಂಟೆಗಳ ಮೇಲೆಯೇ ಪಂಜುಗಳು ಬೆಳಕಿನಲ್ಲಿ. ವೇಷಧಾರಿಗಳ ಮೈಮೇಲೆ ಅಲಂಕಾರಗೊಂಡಾಗ ಅವುಗಳ ವೈಭವವೇ ವೈಭವ ! ದಾಸರ ಬದುಕೂ ಅದೇ ಆಗಿತ್ತು!! ರಾತ್ರಿ ನಾಟಕವಾಡುವಾಗ ಒಬ್ಬ ರಾಜನಾದರೆ , ಮತ್ತೊಬ್ಬ ಮಂತ್ರಿ ಮತ್ತೊಬ್ಬ ಸೇನಾಧಿಪತಿ ಮಗದೊಬ್ಬ ಉಗ್ರನರಸಿಂಹ ಉಗ್ರನರಸಿಂಹನಿಗೆ ಭಕ್ತರಿಂದ ಪೂಜೆ! ನಾಟಕಮುಗಿದು ಬಣ್ಣ ಆಳಿಸಿ ಕೊಂಡ ತಕ್ಷಣ ಸಾಮ್ರಾಜ್ಯ ಕಳೆದು ಕೊಂಡ ಚಕ್ರವರ್ತಿಗಳು ! ನಾಟಕ ಕಳೆದ ಮರುದಿನ ಪ್ರಶಂಸೆಯ ಸುರಿಮಳೆ! ಧವಸ ಧಾನ್ಯಗಳ ಹೊಳೆ! ರಂಗದ ಮೇಲೆ ರಂಗುರಂಗಿನ ವೇಷಧರಿಸಿ ವೀಳ್ಯ ನೀಡಿ ನಾಟಕ ನೋಡಬಯಸಿದವರ ಮನತಣಿಸುವಂತೆ ನಾಟಕವಾಡಿ, ಮಹಾಭಾರತ, ಭಾಗವತ, ಪುರಾಣ ಕಥೆಗಳ ರಸದೌತಣ ಉಣಿಸಿ ರಾತ್ರಿಯಿಡೀ ಪ್ರೇಕ್ಷಕರ ಅಂತರಂಗಗಳನ್ನು ನವರಸಗಳಲ್ಲಿ ಮುಳುಗಿಸಿ ತೇಲಿಸಿ ಜೀವನಸಾಗಿಸುವ ಸಲುವಾಗಿ ಹೊರಟಿತ್ತು, ದೊಂಬಿದಾಸರಮೇಳ! ಕೋಡಂಗಿ ವೇಷದ ವೆಂಕಟಪ್ಪ ತನ್ನ ಸಹಜವಾದ ಮಾತುಗಳಿಂದ ಹಾಸ್ಯ ಚಟಾಕಿಗಳನ್ನು ಹಾರಿಸಿ ಎಲ್ಲರನ್ನೂ ನಗಿಸುತ್ತಿದ್ದ.

ದೊಂಬಿದಾಸರ ಮೇಳದವರು ಮಾರೇಗೌಡನದೊಡ್ಡಿಯ ಮುಂದಿದ್ದ ಪಾಳು ಮಂಟಪವನ್ನು ತಲುಪುವಷ್ಟರಲ್ಲಿ, ಸೂರ್ಯ ಮುಳುಗುವ ಸಮಯ ಹತ್ತಿರವಾಗುತ್ತಿತ್ತು. ಗುಂಪಿನಲ್ಲಿದ್ದ ಹೆಂಗಸರು ಮಕ್ಕಳು ಒಂದೆಡೆ ಕುಳಿತು ಕೊಂಡರು ಸಾಮಾನುಗಳನ್ನು ಇಳಿಸುತ್ತಿದ್ದಂತೆಯೇ ಅದರಿಂದ ಪಾಜಿ (ಬಲೆ) ಯನ್ನು ತೆಗೆದುಕೊಂಡು ವೆಂಕಟ್ರಾಮಣಪ್ಪ, ವೃದ್ಧೆಯೊಬ್ಬಳತ್ತತಿರುಗಿ "ಏಮೇ ಇಟ್ಲ ಪಯ್ಯಿ ಅಟ್ಲ ವೊಚ್ಛೇಸ್ತಾನು, ಕಾರಮ್ನೂರ್ಕೊ" (ಏನೇ ಇಂಗೋಗಿ ಅಂಗ್ಬಂದ್ಬಿಡ್ತೀನಿ ಕಾರ ಆರ್ಕೋ) ಎಂದವನೇ ಗೌಜಲಹಕ್ಕಿಗಳನ್ನು ಹಿಡಿಯುವ ಬಾಜಿಯನ್ನು ಹೆಗಲಿಗೆ ಏರಿಸಿ ಕೊಂಡು ಸ್ವಲ್ಪ ದೂರದಲ್ಲಿದ್ದ ಪೊದೆಗಳತ್ತ ನಡೆದ ಕೆಲವು ನಿಮಿಷಗಳ ನಂತರ, ಹೆಣ್ಣು ಗೌಜಲಹಕ್ಕಿಯನ್ನು ಗಂಡುಗೌಜಲಹಕ್ಕಿಯೊಂದು ಹತ್ತಿರಕ್ಕೆ ಕೂಗುತ್ತಿರುವುದನ್ನು ಕೇಳಿಸಿ, ವೃದ್ಧೆ ಕಾರ ಆರೆಯುತ್ತಿರುವ ಶಬ್ದ ಅದಕ್ಕೆ ತಾಳ ಹಾಕುತ್ತಿತ್ತು.

ಹರಕಲು ಈ ಚಲ ಚಾಪೆಯನ್ನು ಹಾಸಿ ಕೊಂಡು ಕೆಲವರು ಅದರ ಮೇಲೆ ವಿಶ್ರಾಂತಿ ಪಡೆಯ ತೊಡಗಿದರು. ಹೆಣ್ಣೊಂದು ಹತ್ತಿರದಲ್ಲಿಯೇ ಇದ್ದ ಮರವೊಂದರ ಕೆಳಗೆ ಬಾಗಿದ್ದ ಕೊಂಬೆಗೆ ಹಗ್ಗಕಟ್ಟಿ, ಹಳೆಯ ಸೀರೆಯ ಬಟ್ಟೆಯನ್ನು ಜೋಳಿಗೆಯಂತೆ ಕಟ್ಟಿ , ಅದರಲ್ಲಿ ಎಳೆಯ ಮಗುವನ್ನಿರಿಸಿ ಹತ್ತಿರದಲ್ಲಿಯೇ ಬಿದ್ದಿದ್ದ ಮೂರು ಗುಂಡು ಕಲ್ಲುಗಳನ್ನು ಎತ್ತಿಕೊಂಡು ಹೋಗಿ ಮಂಟಪದ ಮೂಲೆಯಲ್ಲಿ ಒಳಯಂತಿರಿಸಿ ಅಡಿಗೆ ಮಾಡಲು ಅಣಿ ಮಾಡತೊಡಗಿದಳು.

ಕೆರೆಯಲ್ಲಿ ಮುಖ ತೊಳೆದು ಬಂದು, ಮುಖಕ್ಕೆ ದೊಡ್ಡದಾಗಿ ನಾಮ ಬಳಿದುಕೊಂಡು, ತಲೆಗೆ ಪೇಟದಂತೆ ಬಟ್ಟೆಯನ್ನು ಸುತ್ತಿಕೊಂಡ ಮೇಳದ ಹಿರಿಯ, ಅವನೊಡನೆ ಮತ್ತೊಬ್ಬನೂ ನಾಮಬಳಿದುಕೊಂಡು ಸಿದ್ಧನಾದ. ಮಲಗಿ ವಿಶ್ರಾಂತಿ ಪಡೆಯುತ್ತಿದ್ದವರತ್ತ ನೋಡಿದ ಮುಖಂಡ "ಮೇಮು ಯಜಮಾನುಲ್ನಿ ಸೂಸ್ಕೋ ನೊಸ್ತಾಮು, ರಾತುರ್ಕೇ ನಾಟುಕ್ಮಾಡಲ್ನೋ ಏಮೋ ...... ಪಣ್ಕೊವೊದ್ದಂಡಬ್ಬ ' (ನಾವು ಯಜಮಾನರನ್ನು ನೋಡ್ಕೊಂಡು ಬರ್ತೀವಿ ರಾತ್ರಿಗೆ ನಾಟಕ ಆಡ್ಬೇಕೋ ಏನೋ ಮಲಿಕೋ ಬೇಡ್ರಪ್ಪಾ) ಎಂದು ಎಚ್ಚರಿಸಿ ಊರ ಗೌಡರನ್ನು ನೋಡಲು ಊರಿನತ್ತ ನಡೆದರು .

ಅಷ್ಟರಲ್ಲಿ ಅವರಿಗೆ ಎದುರಾದ ವೆಂಕಟ್ರಾಣಪ್ಪ, ತಾನು ಹಿಡಿದು ತಂದಿದ್ದ ಗೌಜಲ ಹಕ್ಕಿಗಳನ್ನು ತೋರಿಸುತ್ತಾ "ಮೀರೋಚ್ಚೇ ಅಂತುಟ್ಕೊ ಚಾಕ್ನ ಸೇಸು ಪೆಟ್ಟಂಟಾನು ಸ್ಯಾಪುಳ್ಳು ಉಲ್ಸಾಮ್ನಾಪ್ತೆರಿಕುಮ್ನಾಪ್ಕೋನ್ರಾಂಡ್ರೋ" (ದೊಂಬಿದಾಸರು ಬೇರಾರಿಗೂ ತಿಳಿಯಬಾರದೆಂದು ರಹಸ್ಯವಾಗಿ ಬಳಸುವ ಮರುಗು ಭಾಷೆ (ಮುಸುಕುಭಾಷೆ) ಬೇರೆ ಅಲೆಮಾರಿ ಪಂಗಡದವರು ಸಹ ಈ ಭಾಷೆಯನ್ನು ಬಳಸುತ್ತಾರೆ) (ನೀವು ಬರೋ ಅಷ್ಟರಲ್ಲಿ ಚಾಕ್ನ ಮಡಗಿರ್ತೀನಿ ಅವರುದುಡ್ಕೊಟ್ರೆ ಹೆಂಡಾ ತಗೊಂಡು ಬನ್ರೋ) ಎಂದ. "ನಾಪ್ಕೊನೊಸ್ತಮು, ರವ್ವಂತತೆಲ್ಗಡ್ಲು ಜಾಸ್ತಿ ಎಯ್ಮಾಮೋ" (ತಗೊಂಡ್ಬರ್ತೀವಿ, ಸ್ವಲ್ಪ ಬೆಳ್ಳುಳ್ಳಿ ಜಾಸ್ತಿನೇ ಹಾಕು ಮಾವೋ) ಎಂದು ಮೇಳದ ಮುಖ್ಯಸ್ಥ ಮುಂದೆ ನಡೆಯುತ್ತಾ.

"ರಾ ರಾಮುನ್ಯಪ್ಪ ಮಾಂಸಂ ಕೋಸ್ದಾಮು" (ಬಾ ರೋಮು ನಿಯಪ್ಪ ಮಾಂಸ ಕುಯ್ಯೋಣ ಎಂದು ಅಲ್ಲಿಯೇ ನಿಂತಿದ್ದ ಪ್ರಹ್ಲಾದನ ಪಾರ್ಟ್ಮಾಡುವ ಮುನಿಯಪ್ಪನನ್ನು ಕರೆದ ವೆಂಕಟ್ರಾಣಪ್ಪ. ಹೆಣ್ಣು ದೇಶದವರು ನಾಟಕವಾಡಲು ಬಂದಿರುವರೆಂಬ ಎಂಬ ವಿಷಯ ತಿಳಿದೊಡನೆಯೇ, ಗೌಡರ ಮನೆಯ ಮುಂದೆ ಊರಿಗೆ ಊರೇ ನೆರೆದಿತ್ತು. ಮೇಳದ ಮುಖ್ಯಸ್ಥನನ್ನು ಆದರ ಪೂರ್ಣವಾಗಿ ಆಹ್ವಾನಿಸಿದ ಗೌಡರು. ಏನ್ದಾಸ್ರೇಬಾಳದಿನಾಆಗೋಯ್ತುನಮ್ಮೂರುಗ್ಬಂದು" ಎಂದರು. "ಊರೂರು ತಿರ್ಗೋದೆ ನಮ್ಮ ಕಸುಬಲ್ವೇ ಒಂದ್ಸಾರಿ ನಿಮ್ಮೂರುನ್ಮ್ಯಾಲ್ ಓಗಿತ್ತು, ಅಂಗೇ.. ಬೆಳ್ಳೂರು ನಾಗಮಂಗ್ಲಾ, ಯಲ್ಲಾ ಸುತ್ತಾಡ್ಕೊಂಡು ಬರೋ ಒತ್ಗೆ ಇಷ್ಟು ದಿನಾ ಆಗೋಯ್ತು ನೋಡಿ" ಎಂದು ನಕ್ಕ ಹೆಣ್ಣುವೇಷದ ನಂಜುಂಡಪ್ಪ. "ಆಯ್ತು ಬುಡಿ, ನಮುಗ್ನೀವ್ಯಾವಾಗ್ಬಂದ್ರೂ ಸಂತೋಷಸಾನೇ ಈ ಸಾರಿ ಯಾವ್ನಾಟ್ಕ ಆಡ್ತೀರೀ?" ಕುತೂಹಲದಿಂದ ಪ್ರಶ್ನಿಸಿದ ಗೌಡರು. "ಅದು ನಿಮುಗ್ಬುಟುದ್ದು, ಪ್ರಹ್ಲಾ ಚರಿತ್ರೆ ಆಡು ಅಂದ್ರೂ ಆಡ್ತೀವಿ ಗಂಗೆ ಗೌರಿ ಕಥೆ ಆದ್ರೂ ಸರಿ, ಬ್ಯಾಡ ಅಂದ್ರೆ ಕೃಷ್ಣ ಪಾರಿಜಾತನೋ ಕರಿ ಬಂಟನ ಕಾಳ್ಗಾನೋ ಯಾವುದ್ಬೇಕಾದ್ರೂ ಆಡ್ತೀವಿ ಎಂದ ಮೇಳದ ಮುಖ್ಯಸ್ಥ.

ನೀವ್ಯಾವ್ ನಾಟಕ ಆಡಿದ್ರೂ ಚೆನ್ನಾಗೇ ಆಡ್ತೀರ ಬುಡಿ ಆ ಕ್ವಾಣಂಗಿಯಂಕ್ಟಪ್ಪ ಬಂದವ್ನೋ" ಎಂದ ಸಣ್ಣಗೆ ನಗುತ್ತಾ, ಪಕ್ಕದಲ್ಲೇ ನಿಂತಿದ್ದ ಪಟೇಲ್ಪುಟ್ಟ ಸ್ವಾಮಿ. "ಅವನಿಲ್ಲ ಅಂದ್ರೆ ಜನ ನಗೋದ್ಯಂಗೆ? ನಮ್ಮ ನಾಟಕ ನಡ್ಯೋದೆಂಗೆ? ಬಂದವ್ನೆ ಮಂಟಪದ್ತಾವೇ ಅವ್ನೇ" ಎಂದು ಸಣ್ಣಗೆ ನಕ್ಕ ನಂಜುಂಡಪ್ಪ. "ಸರಿ ಬುಡಿ ಅಂಗಾರೆ ನಾಳೆ ಸುಕ್ರವಾರ ಪ್ರಹ್ಲಾ ಚರಿತ್ರೆನೇ ಆಡ್ಬುಡಿ" ಎಂದು ಮೇಳದ ಮುಖ್ಯಸ್ಥನನ್ನು ನೋಡಿ "ನೀವೇ ತಾನೇ ಇರಣ್ಯಕಸ್ಬು" ಎಂದರು. ನಾನೇ ಗೌಡ್ರೇ ಇವ್ನೇ ಕಯಾದು, ನಮ್ಮ ಮಾವನೇ ಇರಣ್ಯಾಕ್ಸ, ನನ್ನ ಮಗ ಮುನಿಯಪ್ಪನೇ ಪ್ರಲ್ಲಾದ" ಎಂದ ಮೇಳದ ಮುಖ್ಯಸ್ಥ. ಒಳ್ಳೇದಾಯ್ತು ಬುಡಿ ದಾಸ್ರೇ.... ತಕಳ್ಳಿ" ಎಂದವನೇ ವೀಳ್ಯದಲ್ಲಿ ಹಣವನ್ನಿಟ್ಟು ಗೌರವದಿಂದ ಮೇಳದ ಮುಖ್ಯಸ್ಥನಿಗೆ ನೀಡಿದ ಮಾರೇಗೌಡ. ಆ ದಿನ ರಾತ್ರಿ ಹೆಂಡಕುಡಿದು, ಗೌಜಲ ಹಕ್ಕಿಯ ಮಾಂಸವನ್ನು ಮನಸಾರೆ ತಿಂದು, ನಾಳಿನ ಗತಿಯೇನು? ಎಂಬುದರ ಬಗ್ಗೆ ಯಾವ ಯೋಚನೆಯೂ ಇಲ್ಲದೆ ನೆಮ್ಮದಿಯಾಗಿ ನಿದ್ರಿಸಿತು ದೊಂಬಿದಾಸರ ಮೇಳದ ಗುಂಪು. ನಾಟಕ ಮುಗಿದ ಮಾರನೆಯ ದಿನ ಸುಗ್ಗಿಯ ಕಾಲವಾಗಿದ್ದರಿಂದ ಹೆಣ್ಣು ವೇಷದವರು ಹೆಗಲಿಗೆ ಹಸುಬೆಗಳನ್ನು ತಗಲಿಹಾಕಿಕೊಂಡು ಕಣಗಳ ಬಳಿ ಸುಳಿದಾಡುತ್ತಿದ್ದರು. ಅವರನ್ನು ನೋಡಿದ ಊರಿನ ಜನರು, "ಇವನೇ ರಾತ್ರಿ ಇರಣ್ಯ ಕಸ್ಬು ಪಾರ್ಟ್ಮಾಡಿದ್ದೋನು, ಆಕಣ್ಣ್ಕ್ವಾರೆ ಕಟ್ಕೊಂಡು ಯಂಗ್ಒಳ್ಳೇ ರಾಕ್ಷಸುನ್ ತರಾ ಕಾಣುತ್ತಿದ್ದ ಅಲ್ವಾ? ಎಂದು ಒಬ್ಬನೆಂದರೆ ಮತ್ತೂಬ್ಬ ಆ ನರಸಿಂಹ ಸ್ವಾಮಿಪಾರ್ಟ್ ಮಾಡ್ದೋನ್ಗೆ ಮೈಮ್ಯಾಲ್ದ್ಯಾವರ್ಬಂದು, ಅಡ್ಡಲಾಗಿಟ್ಟಿದ್ದ ಏಳೆಂಟು ಏಣೀನೆ ಮುರ್ದಾಕ್ಬುಟ್ಟಾ" ಎಂದರೆ ಮಗದೊಬ್ಬ ಆ ಎಣ್ಏಸಆಕಿದ್ದ ಈವಯ್ಯ ತೇಟ್ಎಣ್ಎಂಗುಸ್ನಂಗೇಕಾಣ್ತಿದ್ದ. ಏನಿವನ ಗಂಟ್ಲು.....? ಬಲ್ಚೆಂದಾಗಿ ಆಡ್ದ. ಕ್ವಾಣಂಗಿ ಏಸ ಆಕಿದ್ನಲ್ಲ ಅವ್ನು ನಗ್ಸೀ ..... ನಗ್ಸೀ ವಟ್ನೋವು ಬರಸ್ಬುಟ್ಟ" ಎಂದು ತಮ್ಮ ತಮ್ಮಲ್ಲೇ ಮಾತಾಡಿ ಕೊಳ್ಳುತ್ತಿದ್ದರು.

ಒಂದೆಡೆ ಹುಡುಗರಿಬ್ಬರು ಹಿಂದಿನ ರಾತ್ರಿ ನಡೆದಿದ್ದ ಹಾಸ್ಯ ಪ್ರಸಂಗವನ್ನು ನೆನಪಿಸಿಕೊಂಡು ತಮ್ಮ ತಮ್ಮಲ್ಲೇ "ದೊರೆಗಳೇ ಒಂದು ಸಂತೋಸದ ಸುದ್ದಿ! ಏನದು ಸಂತೋಸದ ಸುದ್ದಿ?" ಮಹಾರಾಣಿಯವರಿಗೆ ಮಗುವಿನ ಜನನವಾಗಿದೆ" "ಹೌದಾ? ಬಹಳ ಸಂತೋಸ. ಗಂಡು ಹೆಣ್ಣು "ಗೊತ್ತಿಲ್ಲ ಮಹಾಪ್ರಭು ಮಗುವಿಗೆ ಒಂದು ತುಂಡು ಎರಡು ಚೆಂಡಿವೆ" ಎಂದು ಕೋಡಂಗಿ ಹಾಗೂ ದೊರೆಯ ನಡುವೆ ನಡೆದ ಮಾತುಗಳನ್ನು ತಾವೇ ಅಭಿನಯಿಸಿ ನಗುತ್ತಿದ್ದರು.

ಕಣದ ಬಳಿ ಬಂದ ನಾಟಕದವರಿಗೆ ಕಣ ಮಾಡುತ್ತಿದ್ದವರು ನಗು ನಗುತ್ತಲೇ ಮೊರದಲ್ಲಿ ಮೊಗೆದು ಮೊಗೆದು ಹಸುಬೆಯ ತುಂಬಾರಾಗಿ, ಅವರೇಕಾಳು, ತೊಗರೇಕಾಳು, ಹುರುಳೀ ಕಾಳು ಹುಚ್ಚೆಳ್ಳುಗಳನ್ನು ಧಾರಾಳವಾಗಿ ನೀಡುತ್ತಿದ್ದರು.

ಮಂಟಪದ ಬಳಿ ಇರುತ್ತಿದ್ದ ಕೆಲವರು ಒಣಗಿದ ಹೊಂಗೇಕಾಯಿಗಳನ್ನು, ಹುಣಸೆಕಾಯಿಗಳನ್ನು, ಸೀಗೆಕಾಯಿಗಳನ್ನು ಆಯ್ದು ತರುತ್ತಿದ್ದರು.

ಮುಂದಿನ ಊರಿನಲ್ಲೂ ಅವರ ಅಲೆ ಮಾರಿ ಜೀವನ ನಿರಾತಂಕವಾಗಿ ಹಾಗೆಯೇ ನಡೆಯುತ್ತಿತ್ತು ಅಕ್ಕಿ,ರಾಗಿ, ಕಾಳುಗಳಿಂದ ಹಿಡಿದು ಸಾಂಬಾರ್ಪದಾರ್ಥಗಳವರೆಗೂ ಬೆಳೆಯುವ ಶ್ರಮವಿಲ್ಲದೆ ಕೊಳ್ಳಲು ಹಣದ ಅಗತ್ಯವಿಲ್ಲದೇ ನಿರಾಯಾಸವಾಗಿ ಬದುಕು ಸಾಗಿ ಹೋಗುತ್ತಿತ್ತು. ಗಳಿಸಿದ ಹಣ ಉಳಿಯುತ್ತಿರಲಿಲ್ಲ ಉಳಿಸಬೇಕೆಂಬ ಯೋಚನೆಯೂ ಅವರಿಗಿರಲಿಲ್ಲ ಆದರೆ ಮೇಳದ ಮುಖ್ಯಸ್ಥನ ತಲೆಯಲ್ಲಿ, ತನ್ನ ಗೆಳೆಯ ಹಿಂದೆ ನಾಟಕ ಮಾಡಲು ಒಂದು ಊರಿಗೆ ಹೋಗಿ ಎದುರಿಸಿದ್ದ ಘಟನೆಗಳನ್ನು ತನ್ನೊಡನೆ ಹೇಳಿದ್ದುದರ ನೆನಪಾಗಿ, ಎದೆ ಝಲ್ಎಂದಿತ್ತು. ಮುಂದೆ ತಮ್ಮ ಮೇಳಕ್ಕೂ ಅಂತಹುದೇ ಪರಿಸ್ಥಿತಿ ಎದುರಾದರೆ ಹೇಗೆ ಎಂಬ ಆತಂಕದಿಂದ ಇಡೀ ರಾತ್ರಿ ನಿದ್ರೆ ಬಾರದೆ ಒದ್ದಾಡುತ್ತಿದ್ದ.

ಅದೊಂದು ಅಮಾವಾಸ್ಯೆಯ ರಾತ್ರಿ. ಎತ್ತ ನೋಡಿದರೂ ಗವ್ವೆಂದು ಕವಿದ ಕಪ್ಪನೆಯ ಕತ್ತಲು!. ಸುಮಾರು ಆರು ತಿಂಗಳ ನಂತರ, ಬತ್ತದ ಸೀಮೆಯ ಸರ್ಕೀಟ್, ಹಾರ್ಮೋನಿಯಂ ರಿಪೇರಿ ಸರ್ಕೀಟ್ ಮುಗಿಸಿಕೊಂಡು, ತಾವು ನಾಟಕವಾಡಲು ಅನುವಾದ ಹಳ್ಳಿಯನ್ನು ಹುಡುಕುತ್ತಾ ಹೊರಟಿದ್ದ ದೊಂಬಿದಾಸರ ಮೇಳದ ಗುಂಪೊಂದು, ಯಾವ ಹಳ್ಳಿಯೂ ಸಿಗದೇ, ಸುತ್ತಿದ ಜಾಗದಲ್ಲೇ ಸುತ್ತುತ್ತಾ, ತಾವು ಹೊತ್ತಿದ್ದ ನಾಟಕಕ್ಕೆ ಸಂಬಂಧಿಸಿದ ವಸ್ತುಗಳನ್ನು ಹೊತ್ತು, ಹೊತ್ತು ಹೈರಾಣಾಗಿ ಹೋಗಿತ್ತು. ಗುಂಪಿನಲ್ಲಿ ಯಾರಿಗೂ ಮುಂದೆ ನಡೆಯುವ ತ್ರಾಣವಿರಲಿಲ್ಲ.

ಮುಂದೆ ನಿಧಾನವಾಗಿ ನಡೆಯುತ್ತಿದ್ದ ಮೇಳದ ಮುಖ್ಯಸ್ಥ ಉಲ್ಲೂರಪ್ಪ ಒಂದೆಡೆ ನಿಂತು, ಒಮ್ಮೆ ಆಕಾಶದತ್ತ ತಲೆ ಎತ್ತಿ ನೋಡಿದ. ಕಪ್ಪನೆಯ ಆಕಾಶ ಕೆಕ್ಕರಿಸಿ ನೋಡುತ್ತಿತ್ತು. ಆಕಾಶದಲ್ಲಿ ನಕ್ಷತ್ರಗಳ ಸುಳಿವಿರಲಿಲ್ಲ. ನಿಡಿದಾಗಿ ಬಿಟ್ಟು, ತನ್ನ ಅನುಯಾಯಿಗಳನ್ನುದ್ದೇಶಿಸಿ “ಏನ್ರಪ್ಪೋ… ಮ್ಯಾಲ್ಗಡೆ ಒಂದ್ ಚುಕ್ಕೀನೂ ಇಲ್ಲ. ದಾರೀನೂ ತಿಳೀತಿಲ್ಲ. ಈವತ್ತು ಅಮಾಸೆ ಅಂತ ಗೊತ್ತಾದ್ರೆ ಹೊರಡ್ತಾನೇ ಇರ್ಲಿಲ್ಲ. ಎಲ್ಲಾದ್ರೂ ದಾರಿಗೀರಿ ತಪ್ಪುದ್ವೋ ಯಂಗೆ?” ಎಂದ ಆತಂಕ ತುಂಬಿದ ಸ್ವರದಲ್ಲಿ.

“ಏಯ್, ಬುಡು ಮಾವೋ.. ಯಾತುರ್ ಮಾತು ಅಂತ ಆಡ್ತೀಯ. ಈವತ್ತು ಅಮಾಸೆ ಅಂತ ನಿನ್ಗೂ ಗೊತ್ತಾಗ್ಲಿಲ್ವ?” ಎಂದ ಮುಖ ಮೀಸೆ ಮುನಿಯಪ್ಪ ಅಸಮಧಾನವನ್ನು ವ್ಯಕ್ತಪಡಿಸುತ್ತ.

“ಗೊತ್ತಗಿದ್ರೆ, ನಾನ್ಯಾಕೋ ಕರೊಂಡ್ ಬತ್ತಿದ್ದೆ?” ಎಂದ ಮೇಳದ ಮುಖ್ಯಸ್ಥ ಸ್ವಲ್ಪ ಏರಿದ ಧ್ವನಿಯಲ್ಲಿ.

“ಅಂಗಲ್ಲ ಮಾವೋ, ನೀನ್ಯಾಕ್ ರೇಗ್ತೀಯಾ? ಈ ಕತ್ಲಲ್ಲಿ ನಡೀತೀದ್ರೆ ಉಳ ಉಪ್ಪಟೇನ ತುಳುದ್ಬುಟ್ರೆ ಏನ್ಗತಿ ಅಂತ ಭಯ ಆಯ್ತು, ಅದಕ್ಕಂಗಂದೆ” ಎಂದ ತನ್ನ ಅಳಲನ್ನು ತೋಡಿಕೊಳ್ಳುವವನಂತೆ. ‘ಹಿಂದೆ ಮಾಲದಾಸರೀ ಮರು ಮಾತಂಗಿ ಬಳಿ (ಮಂಗರಬಳ್ಳಿ) ತುಳ್ದು, ಸುತ್ತುದ್ ಜಾಗ್‍ದಲ್ಲೇ ಸುತ್ತುದ್ನಂತೆ, ಹಂಗೇನಾದ್ರು ಆಗೋಗೈತೋ ಏನೋ ಎಂದ ಅದುವರೆಗೂ ಮೌನವಾಗಿದ್ದ ಮದಲಪ್ಪ.

ಕರ್ನಾಟಕಾಂಧ್ರ ಸಾರ್ವಭೌಮ ಶ್ರೀ ಕೃಷ್ಣದೇವರಾಯ ರಚಿಸಿರುವ “ಅಮುಕ್ತ ಮಾಲಿಕ” ಗ್ರಂಥದಲ್ಲಿ ‘ಮಾಲದಾಸರಿ” (ಹೊಲೆಯದಾಸರಿ) ಕಥೆಯನ್ನು ಬರೆದಿದ್ದಾರೆ. ಅದರಲ್ಲಿ ಮರುಲಿ ಮಾತಂಗಿ ಬಳ್ಳಿಯನ್ನು, ಮಾಲದಾಸರಿ ತುಳಿದ ಬಗ್ಗೆ ವಿವರಿಸಿದ್ದಾರೆ).

ಔದೌದು, ಮರುಲ್ ಮಾತಂಗಿ ಗಿಡ ತುಳುದ್ರೆ ಹೋಗ್ಬೇಕಾಗಿರೋ ದಾರಿನೇ ಮರುತ್ ಬುಡ್ತಾರಂತೆ” ಎಂ ಕ್ವಾಣಂಗಿ ವೇಷದ ಕೃಷ್ಣಪ್ಪ.

“ಅಂಗಾರ್ ಮುಂದುಲ್ ಗತಿ?” ಎಂದ ಮುಖ ವೀಣೆ ಮುನಿಯಪ್ಪ.

“ಆ ನಮ್ಮಪ್ಪ ವೆಂಕಟರಮಣ ಮಾಡ್ದಂಗಾಗ್ಲಿ. ಇದೇ ದಾರೀಲಿ ಹೋಗಾನ ನಡೀರಿ” ಎಂದ ಉಲ್ಲೂರಪ್ಪ ಮುಂದಕ್ಕೆ ಹೆಜ್ಜೆ ಹಾಕುತ್ತಾ. ಅವನ ಅಭಿಪ್ರಾಯಕ್ಕೆ ಎಲ್ಲರೂ ಸಮ್ಮತಿ ಸೂಚಿಸುವವರಂತೆ ಮಾತನಾಡದೆ ಮೌನವಹಿಸಿದರು.

ಸುಮಾರು ಅರ್ಧಗಂಟೆಯ ಪ್ರಯಾಸದ ಪ್ರಯಾಣದ ನಂತರ ದೊಂಬಿದಾಸರ ಮೇಳದ ಗುಂಪು ಒಂದು ಊರಿನ ಮುಂಭಾಗವನ್ನು ತಲುಪಿತು. ನಡೆಯುತ್ತಿದ್ದ ಉಲ್ಲೂರಪ್ಪ ಥಟ್ಟನೆ ನಿಂತವನೇ, ನಿಂತಲ್ಲೇ ಮೂಗರಳಿಸಿ ಸುತ್ತಲೂ ತಿರುಗಿ ವಾಸನೆ ನೋಡುತ್ತಾ- “ಮುನಿಯಪ್ಪ, ಹಿಪ್ಪೇ ಹೂಗಳ ವಾಸ್ನೆ ಗಂ ಅಂತಾ ಆಯ್ತು., ಇದು ಚಾಪೇದೊಡ್ಡಿ ದೇವುರ್‍ದಯ ನೆಟ್‍ಗೆ ಊರ್‍ತಕೇ ಬಂದ್ಬುಟ್ಟೋ ಬನ್ನಿ” ಎಂದ ಮುಂದಕ್ಕೆ ಹೆಜ್ಜೆ ಹಾಕುತ್ತಾ. ಅವನ ಮಾತುಗಳನ್ನು ಕೇಳಿ, ಮೇಳದ ಉಳಿದವರ ಮೂಗುಗಳೂ ಚೂರುಕಾದವು. ಅವರ ಮೂಗುಗಳಿಗೂ ಹಿಪ್ಪೆಯ ಹೂಗಳ ವಾಸನೆ ಗಪ್ಪನೆ ಬಟಿಯಿತು. ಎಲ್ಲರೂ ಸಂತಸದಿಂದ ತಮ್ಮ ನಾಯಕನನ್ನು ಹಿಂಬಾಲಿಸಿದರು.

ಓಣಿಯಂತಿದ್ದ ಊರಿನ ಮುಂಭಾಗದ ದಾರಿಯ ಇಕ್ಕೆಲಗಳಲ್ಲೂ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದ ಹಿಪ್ಪೆಯ ಮರಗಳು, ಕಾರ್ಗತ್ತಲಿನಲ್ಲಿ ಊರನ್ನು ಕಾವಲು ಕಾಯಲು ನಿಂತ ಕಾಡಿನ ಭಟರಂತೆ ಕಾಣಿಸುತ್ತಿದ್ದವು. ಊರ ಮುಂದಿನ ವಿಶಾಲವಾದ ಓಣಿಯಂತಿದ್ದ ಜಾಗವನ್ನು ದಾಟಿ, ಊರಿನ ಮುಂಭಾಗವನ್ನು ಪ್ರವೇಶಿಸಿದರು. ಕತ್ತಲಿನಲ್ಲಿ ಊರ ಮುಂದಿದ್ದ ಅಶ್ವತ್ಥ ಮರದ ಜಗಲಿಗಳು ಅಸ್ಪಷ್ಟವಾಗಿ ಕಾಣಿಸಿದವು.

“ಅಬ್ಬಾ… ಯಂಗೋ ಊರ್ ತಲುಪ್ದೋ, ಕಾಲ್ ಎಳೀತಾವೆ ಒಸಿ ಒತ್ತು ಕೂತ್ಕೊಂಡೋಗಾನ” ಎಂದವನೇ, ಅಶ್ವತ್ಥ ಕಟ್ಟೆಯೊಂದರ ಜಗಲಿಯ ಮೇಲೆ ಕುಳಿತ. ಉಳಿದವರೆಲ್ಲರೂ ಸಾಮಾನುಗಳನ್ನೆಲ್ಲಾ ಅಶ್ವತ್ಥ ಕಟ್ಟೆಯ ಮೇಲಿರಿಸಿ, ಉಸ್ಸೆಂದು ನಿಟ್ಟುಸಿರು ಬಿಡುತ್ತಾ ಜಗುಲಿಯ ಮೇಲೆ ಕುಳಿತರು. ಸುಮಾರು ಹದಿನೈದು ನಿಮಿಷಗಳ ವಿಶ್ರಾತಿಯ ನಂತರ
“ಇನ್ನು ಹೋಗಾನೇನ್ರಪ್ಪಾ?” ಎಂದ ಉಲ್ಲೂರಪ್ಪ.
“ಎಷ್ಟೊತ್ತು ಅಂತ ಇಲ್ಲೇ ಕೂತಿರೋಕಾಯ್ತದೆ. ನಡೀರಿ ಹೋಗಿ ಗೌಡರ್ ನೋಡಾನ” ಎಂದ ಮದ್ದಲಯ್ಯ ತನ್ನ ಮದ್ದಲೆಯನ್ನು ಕಂಕುಳಿಗೇರಿಸುತ್ತಾ ಎಲ್ಲರೂ ತಮ್ಮ ತಮ್ಮ ಸಾಮಗ್ರಿಗಳನ್ನು ಎತ್ತಿಕೊಂಡು ಊರಿನ ಒಳಭಾಗದತ್‍ತ ನಡೆದರು.

ಸುಮಾರು ಎರಡು ನಿಮಿಷಗಳ ಕಾಲ ಮೇಳದವರ ನಡುವೆ ಮೌನವಾವರಿಸಿತು. ಅದುವರೆಗೂ ಮಾತನಾಡದೇ ಮೌನವಾಗಿದ್ದ ನಾರಾಣಪ್ಪ. “ಏನ್ರಪ್ಪಾ, ನಾಯಿಗಳೂ ಬೊಗಳ್ತಿಲ್ಲ. ಜನಗಳೂ ಕಾಣ್ತಿಲ್ಲ ಊರ್ನಲ್ಲಿ ದೀಪ್ಗಳು ಕಾಣ್ತಿಲ್ಲ. ಯಾಕೋ ಸಕುನಾನೇ ಸರೀಗಿಲ್ವಲ್ಲ” ಎಂದ ಮನಸ್ಸಿನಲ್ಲಿದ್ದ ಅನುಮಾನವನ್ನು ಹೊರಗೆಡಹತ್ತಾ. ಅಷ್ಟರಲ್ಲಾಗಲೇ ಎಲ್ಲರ ಮನಗಳಲ್ಲೂ ಅದೇ ಪ್ರಶ್ನೆಗಳು ಮೂಡಿ, ಅವರ ಅಂತರಂಗಗಳಲ್ಲಿ ಅನುಮಾನದ ಅಲೆಗಳೆದ್ದಿದ್ದುವು. ಏಯ್… ಎಲ್ರೂ ಮನೀಕಂಬುಟ್ಟವ್ರೋ ಎನೋ, ಲೇ ನಾರಾಣಪ್ಪ ನೀನೊಂದು ಮಟ್ಟೆತ್ಕೊ. ನೀನಉ ಮುಖ ವೀಣೆ ನಡ್ಸು ಮುನಿಯಪ್ಪ. ಆಗ ನೋಡು ಊರ್ ಜನಾ ಎಲ್ಲಾ ಎದ್ದು ಕೂತ್ಕೊತ್ತಾರೆ. ದೊಂಬಿದಾಸರ ಹಾಡು ಅಂದ್ರೆ ಉಡ್ಗಾಟನೆ? ಒಂದ್ ದಪಾ ರಾಗ ಎಳುದ್ರೆ, ಏಳೂರುಗ್ ಕೇಳ್‍ಬ್ಯಾಡ್ವ?” ಎಂದ ಉಲ್ಲೂರಪ್ಪ. ತನ್ನ ತಂಡವನ್ನು ಉತ್ತೇಜಿಸುತ್ತಾ.

ನಾರಾಣಪ್ಪನ ಹಾಡಿಗೆ ಹಿನ್ನೆಲೆಯಾಗಿ ಮುನಿಯಪ್ಪ ಮುಖ ವೀಣೆ ಬಾರಿಸತೊಡಗಿದ, ಜೊತೆಗೆ ಮೇಳದ ಇತರ ಸದಸ್ಯರು ಕೋರಸ್ ಹಾಡತೊಡಗಿದರು. ಅಷ್ಟೆ ಅದುವರರೆವಿಗೂ ಪರಿಸರದ ತುಂಬಾ ಆವರಿಸಿದ್ದ ನೀರವ ಮೌನ ಮಾಯವಾಗಿ, ಪರಿಸರದ ತುಂಬಾ ದೊಂಬಿದಾಸರ ಹಾಡಿನ ಜೊತೆಗೆ ಮುಖವೀಣೆ, ಮದ್ದಲೆಗಳ ಹಿನ್ನೆಲೆಯ ವಾದ್ಯಗಳು ಮೊಳಗತೊಡಗಿ, ಪರಿಸರದ ತುಂಬ ಅಲೌಕಿಕ ಗಾನಮಾಧುರ್ಯದ ಹೊಳೆ ಹರಿಯತೊಡಗಿತು. ಸುಮಾರು ಹತ್ತು ನಿಮಿಷಗಳು ಕಳೆದುಹೋದವು. ನಾರಣಪ್ಪನ ಹಾಡು ನಿಂತಿತು. ಮುಖವೀಣೆ ಮೌನವಹಿಸಿತು. ಮದ್ದಳೆಯ ಧ್ವನಿ ಸ್ತಬ್ದವಾಯಿತು. ಆದರೂ ಒಂದು ಊರ ನಾಯಿಯಾದರೂ ಬೊಗಳಲಿಲ್ಲ. ಅದರ ಬದಲಿಗೆ ಅವರಿಂದ ಸ್ವಲ್ಪ ದೂರದಲ್ಲಿ ಮಂದವಾದ ಬೆಳಕು ಚಲಿಸುತ್ತಾ ಅವರತ್ತಲೇ ಬರುತ್ತಿತ್ತು.

ಉಲ್ಲೂರಪ್ಪನ ಮುಖದ ಮೇಲೆ ಕಳೆ ಬಂದಿತು. ತನ್ನವರತ್ತ ತಿರುಗಿ, “ಉರೋ ಬತ್ತ ಅವ್ರೆ’ ಎಂದ ಸಂತಸ ತುಂಬಿದ ಧ್ವನಿಯಲ್ಲಿ. ಸ್ವಲ್ಪ ಕಳೆಯುವಷ್ಟರಲ್ಲಿ, ಲಾಟೀನಿನ ಬೆಳಕು ಹತ್ತಿರವಾಗಿ ಐವರು ವ್ಯಕ್ತಿಗಳು ಮೇಳದವರ ಮುಂದೆ ಬಂದು ನಿಂತರು. ಲಾಟೀನಿನ ಮಂದವಾದ ಬೆಳಕಿನಲ್ಲಿ ಬಂದ ವ್ಯಕ್ತಿಗಳು ನೆರಳುಗಳಂತೆ ಕಾಣಿಸುತ್ತಿದ್ದರು.
ಹೇಗೋ ಊರು ತಲುಪಿದೆವಲ್ಲ ಎಂಬ ಸಮಾಧಾನ ಮನಸ್ಸಿನಲ್ಲಿ ಮೂಡಿ, ತಮ್ಮನ್ನು ಪರಿಚಯಿಸಿಕೊಳ್ಳಲು ಬಾಯ್ತೆರೆದ. ಅಷ್ಟರಲ್ಲಿ, ಮೇಳದವರನ್ನು ಗುರುತಿಸಿ ಬಂದವರ ಪೈಕಿ ಒಬ್ಬ
“ಓ ಹೆಣ್ಣೇಸದ ದೊಂಬಿದಾಸ್ರು… ಬನ್ನಿ. . . ಬನ್ನಿ. . . ನಿಮ್ಮ ವಾದ್ಯುದ್ ಸಬ್ದ, ನಿಮ್ಮ ಆಡ್ ಕೇಳಿ ನೀವೇ ಅನ್ಕೊಂಡೆ. ಸರಿಯಾದ ದಿನಾನೇ ಬಂದಿದ್ದೀರಿ ನಮ್ಮೂರ್ಗೆ. ಬನ್ನಿ ಬನ್ನಿ” ಎಂದು ಆದರದಿಂದ ಆಹ್ವಾನಿಸಿದ. ಅವನ್ಯಾರೆಂಬುದು ತಿಳಿಯದೆ ‘ನೀವು? ಎಂದ ಅರ್ಥೋಕ್ತಿಯಲ್ಲಿ ಉಲ್ಲೂರಪ್ಪ ‘ನಾನು ಬೋರೇಗೌಡ... ಈ ಊರುನ್ ಗೌಡ’ ಎಂದ ಆ ವ್ಯಕ್ತಿ. “ಅನ್ನದಾತ್ರು. . . ಅನ್ನದಾತ್ರು. . . ಎಂದ ಹೊಗಳುವವನಂತೆ ಉಲ್ಲೂರಪ್ಪ. ಉಲ್ಲೂರಪ್ಪನ ಹೊಗಳಿಕೆಗೆ ಹಲ್ಕಿರಿದು ಪ್ರಿಕ್ರಿಯಇಸಿದ ಬೋರೇಗೌಡ. “ಆರ್ ತಿಂಗಳಿಂದ್ಲೂ ಮನುಸುರ್ ಮಕಾ ನೋಡ್ದೆ ಬೇಜಾರಾಗೋಗಿತ್ತು. ಯಂಗೂ ಈವತ್ತು ನೀವು ಮ್ಯಾಳ್‍ದೋರ್ ಬಂದಿದ್ದೀರ, ಈ ರಾತ್ರೀಗೇ ನಾಟ್ಕ ಆಡ್ಬುಡಿ” ಎಂದ.

ಅವನ ಮಾತುಗಳು ಅರ್ಥವಾಗದೆ. ಕ್ಷಣಕಾಲ ಗಲಿಬಿಲಿಗೊಂಡ ಉಲ್ಲೂರಪ್ಪ ತನ್ನವರತ್ತ ನೋಡಿದ. ಆದರೆ ಕತ್ತಲಲ್ಲಿ ಅವರ ಪ್ರತಿಕ್ರಿಯೆಗಳೇನೂ ಕಾಣಿಸಲಿಲ್ಲ. ಗೌಡನತ್ತ ತಿರುಗಿದ ಉಲ್ಲೂರಪ್ಪ.
“ಈವತ್ತು ಅಮಾಸೆ. ಒಳ್ಳೇ ದಿನ ಅಲ್ಲ ನಾಳೆ ರಾತ್ರಿಕ್ ಆಡಾನ ಬುಡಿ ನಾಟ್ಕನ” ಎಂದ ಉಲ್ಲೂರಪ್ಪ.
“ಏಯ್ ಎಲ್ಲಾದ್ರೂ ಉಂಟೆ? ಅಮಾಸೆ ದಿನಾನೇ ಅಲ್ವಾ ನಮುಗ್ ಹಬ್ಬ! ಈವತ್ತು ನಮ್ಮೀರಿರೆಲ್ಲಾ ಬಂದವ್ರೆ ಬಾಳ ಒಳ್ಳೇದಿನ” ಎಂದ ಬೋರೇಗೌಡ, ಅವನ ಮಾತುಗಳನ್ನು ಕೇಳಿ, ಮನಸ್ಸಿನ ಮೂಲೆಯಲ್ಲೆಲ್ಲೋ ಅರ್ಥವಾಗದ ಅನುಮಾನದ ಗಾಳಿ ಬೀಸಿ, ಹಿಂದೆ ನಿಂತಿದ್ದ ಮದ್ದಲಯ್ಯನತ್ತ ತಿರುಗಿ
“ಏಮ್ರಾ… ಸ್ಯಾಪುರ್ಡು ಇಟ್ಲಾ ವಾಕ್ಯಾಣಿಸ್ತೋಡು?” ಎಂದ (ಏನೋ ಆಸಾಮಿ ಹೀಗೆ ಮಾತಾಡ್ತಿದಾನೆ)
‘ನಾಗ್‍ನಬ್ಬ, ಸ್ಯಾಪುರುಡ್ಕಿ, ಮನ್ ವಾಕ್ಯಾಣಾಲೊ ಬರಾಮಯ್ಯೀನಿ” (ಹುಷಾರಪ್ಪ ಆಸಾಮೀಗೆ, ನಮ್ಮ ಮಾತುಗಳು ಅರ್ಥವಾದಾವು) ಎಂದು ಎಚ್ಚರಿಸುವವನಂತೆ ಮದ್ದಲಯ್ಯ.
“ಆಯ್ತು ಗೌಡ್ರೆ ರಾತ್ರೀಗೇ ಆಡಾನ ಬುಡಿ ನಾಟ್ಕನ” ಎಂದ ಉಲ್ಲೂರಪ್ಪ.
“ಅಂಗಾರ್ ನಡೀರಿ ನಮ್ಮಟ್ಟೀಗೆ. ಮೊದ್ಲು ಊಟ ಮಾಡ್ಕಳ್ಳಿ’ ಎಂದ ಬೋರೆಗೌಡ. ಸುತ್ತೀ ಸುತ್ತೀ ಸುಸ್ತಾಗಿದ್ದ ದೊಂಬಿದಾಸರ ಮೇಳದವರಿಗೆ ಗೌಡನ ಆ ಆಹ್ವಾನ ಬಹಳ ಆಪ್ಯಾಯಮಾನವೆನಿಸಿ, “ಇಂಕೇಮ್ ಮಾವೋ, ಕುಮಾಯ್‍ಗಿಮಾಯ್ ರೈಪ್ಕೋನಿ ಆಮೀಟ ನಾಟುಕ್ಮಾಡ್ದಾಮು” (ಇನ್ನೇನ್ ಮಾವೋ, ಊಟ ಗೀಟ ಮಾಡ್ಕೊಂಡ್, ಆಮೇಲೆ ನಾಟ್ಕ ಆಡೋಣ) ಎಂದ ಕೋಣಂಗಿ ಕೃಷ್ಣಪ್ಪ.
“ಏಯ್ ಮುಯ್ರಾ ನೋರು. ಪಿಚ್ನಾಕೊಡ್ಕ” (ಏಯ್ ಮುಚ್ಕೊ ಬಾಯಿ ಹುಚ್ ನನ್ಮಗ್ನೆ) ಎಂದು ಗದರಿದ ಉಲ್ಲೂರಪ್ಪ. ಉಲ್ಲೂರಪ್ಪನಿಗೆ ಅಷ್ಟೊಂದು ಕಓಪ ಏಕೆ ಬಂದಿತೆಂಬುದು ಅರ್ಥವಾಗದೆ, ಮುಖ್ಯಸ್ಥನ ಮಾತಿಗೆ ಮರ್ಯಾದೆ ನೀಡುವವನಂತೆ ಮೌನ ವಹಿಸಿದ.


“ಏನ್ ಯೋಚ್ನೆ ಮಾಡ್ತಿದ್ದೀರಿ. ನಡೀರಿ ಮೊದ್ಲು ಊಟ ಮಾಡ್ಕಳ್ಳಿ” ಎಂದ ಬೋರೇಗೌಡ. ಮತ್ತೊಮ್ಮೆ ಆಹ್ವಾನಿಸುವವನಂತೆ.
“ಮೊದ್ಲು ರಂಗ ಪೂಜೆ ಅಗ್ಬುಡ್ಲಿ ಗೌಡ್ರೇ. ಊಟದ್ದೇನು, ಆಮ್ಯಾಲ್ ಮಾಡ್ತೀವಿ” ಎಂದ ಉಲ್ಲೂರಪ್ಪ.
“ಸರಿ ಅಂಗಾರೆ. ನಿಮ್ಮಷ್ಟ ಬಂದಂಗ್ ಮಾಡಿ ದಾಸ್ರೇ” ಎಂದ ಬೋರೇಗೌಡ.

ನಿಂತಲ್ಲಿಂದ ಕದಲಿ ಅವನು ಬಂದ ದಾರಿಯತ್ತ ಹೆಜ್ಜೆ ಹಾಕತೊಡಗಿದ. ಮೇಳದವರೂ ಅವನ ಹಿಂದೆ ಹೆಜ್ಜೆ ಹಾಕತೊಡಗಿದರು. ಸ್ವಲ್ಪ ದೂರ ಹೋದನಂತರ, ಉಲ್ಲೂರಪ್ಪನ ಹತ್ತಿರಕ್ಕೆ ಬಂದ ಕೋಣಂಗಿ ಕೃಷ್ಣಪ್ಪ
“ಪೆದ್ದಯ್ಯ ಏಮೋ ವಾಸುನ್ ಕದಾ?” (ದೊಡ್ಡಪ್ಪ ಏನೋ ವಾಸ್ನೆ ಅಲ್ವಾ?) ಎಂದ. ಒಮ್ಮೆ ಮೂಗಿನ ಒರಳೆಗಳನ್ನು ಅರಳಿಸಿ, ಆಸ್ವಾದಿಸಿದ ಉಲ್ಲೂರಪ್ಪ.
“ಔನ್ರಾ… ಯಾಣ್ಣೋ… ಕೈಕುಲ್ ಕರುಸ್ ಪೈ ಉಂಡಚ್ಚು. ಅದೇ ವಾಸ್ನೇಮೋ” (ಹೌದು ಎಲ್ಲೋ ನಾಯಿಗಳ ಸತ್ತು ಹೋಗಿರಬಹುದು ಅದೇ ವಾಸ್ನೇನೇನೋ) ಎಂದ ಉಲ್ಲೂರಪ್ಪ. ಅವನ ಅಭಿಪ್ರಾಯವನ್ನು ಬಲಪಡಿಸುವವನಂತೆ. “ದಾನ್ಕೇ ಕೈಕುಲ್ ಸಬ್ದ್‍ಮೇ ಇನ್ ಪಡ್‍ಲೇದೋ” (ಅದಕ್ಕೇ ನಾಯಿಗಳ ಶಬ್ದಾನೇ ಕೇಳಿಸಲಿಲ್ಲ) ಎಂದ ಕೋಣಂಗಿ ಕೃಷ್ಣಪ್ಪ. ಅಷ್ಟರಲ್ಲಿ ಊರಮಧ್ಯದಲ್ಲಿದ್ದ ಕಲ್ಲಿನ ಮಂಟಪ ಎದುರಾಯಿತು.ಅದನ್ನು ಗಮನಿಸಿದ ಉಲ್ಲೂರಪ್ಪ, ಮುಂದೆ ಹೋಗುತ್ತಿದ್ದ ಗೌಡನನ್ನುದ್ದೇಶಿಸಿ .

ಗೌಡ್ರೇ, ನಾವು ಈ ಮಂಟುಪ್‍ದಲ್ಲೇ ಬಣ್ಣಾ ಆಕ್ಕೋತೀವಿ. ಚಪ್ರ ಆಕುದ್ ಕೊಟ್ರೆ, ನಾವು ಬ್ಯಾಗ ಆಟ ಸುರು ಮಾಡ್ತೀವಿ” ಎಂದ ಉಲ್ಲೂರಪ್ಪ.
“ಆಯ್ತು… ಅಂಗೇ ಮಾಡಿ ದಾಸ್ರೇ… ನಾನು ಚಪ್ರ ಆಕ್ಸಿ ನಿಮ್ಮನ್ನ ಕರೀತೀನಿ. ಚಪ್ರ ಎಲ್ಲಾಕಸ್ಲಿ?” ಎಂದ ಬೋರೇಗೌಡ.
“ಊರ್ ಮದ್ಯದಾಗ್ ಒಳ್ಳೇದಲ್ವೇ?” ಎಂದ ಉಲ್ಲೂರಪ್ಪ.
“ಆಯ್ತು. ಆಯ್ತು” ಎಂದವನೇ ತನ್ನವರೊಡಗೂಡಿ ಅಲ್ಲಿಂದ ಹೊರಟುಹೋದ ಬೋರೇಗೌಡ. ಹಿಂದಿಯೇ ಸುತ್ತಲೂ ಕತ್ತಲಾವರಿಸಿತು.
“ಅಪ್ಪಾ ವೆಂಕಟಾಚಕ. ಪಂಜಿಗೆಣ್ಣೆ ಆಕಿದ್ದೀಯ? ಎಂದ ಉಲ್ಲೂರಪ್ಪ.
“ಹಾಕೈತಪ್ಪೋ ಸರಿ ಪಂಜು ಅಂಟಿಸು” ಎಂದ ಉಲ್ಲೂರಪ್ಪ ಮಂಟಪದ ಕಲ್ಲೊಂದರ ಮೇಲೆ ಕುಳಿತುಕೊಂಡ. ತಗಡಿನ ಡಬ್ಬದಿಂದ, ಪಂಜೊಂದನ್ನಹರತೆಗೆದ ವೆಂಕಟಾಚಲ, ಪಕ್ಕಟಲ್ಲಿದ್ದ ಕೋಡಂಗಿ ಕೃಷ್ಣಪ್ಪನನ್ನುದ್ದೇಶಿಸಿ -
“ಕೋಡಂಗಣ್ಣ. ಅಂಟಿಸಣ್ಣ ಪಂಜ್ನ” ಎಂದ ಪಂಜನ್ನು ಅವನ ಮುಂದೆ ಹಿಡಿದ.

ಕೋಡಂಗಿ ಕೃಷ್ಣಪ್ಪ, ಬೆಂಕಿಕಡ್ಡಿ ಗೀರಿ ಪಂಜು ಅಂಟಿಸಿದ. ನಿಧಾನವಾಗಿ ಅಂಟಿಕೊಂಡ, ಹೊಂಗೆ ಎಣ್ಣೆ ಹಾಕಿದ ಪಂಜು ಸ್ವಲ್ಪ ಹೊತ್ತಿನ ನಂತರ ಪ್ರಕಾಶಮಾನವಾಗಿ ಉರಿಯತೊಡಗಿತು. ವೆಂಕಟಾಚಲನ ಕೈಯಲ್ಲಿದ್ದ ಪಂಜನ್ನು ತೆಗೆದುಕೊಂಡು ಪಕ್ಕದಲ್ಲಿದ್ದ ಎರಡು ಕಲ್ಲುಗಳ ಮಧ್ಯೆ ಇರಿಸಿದ ಕೋಡಂಗಿ ಕೃಷ್ಣಪ್ಪ.

ಆಯಾಸದಿಂದ ಬಳಲಿ ಬೆಂಡಾಗಿದ್ದ ಎಲ್ಲರೂ ಮಂಟಪದಲ್ಲಿ ಸಿಕ್ಕ ಸಿಕ್ಕಲ್ಲಿ ಕುಳಿತುಕೊಂಡು ಸುಧಾರಿಸಇಕೊಳ್ಳತೊಡಗಿದರು.

ಸುಮಾರು ಹದಿನೈದು ನಿಮಿಷಗಳ ವಿಶ್ರಾಂತಿಯ ನಂತರ, ಪಾತ್ರಧಾರಿಗಳೆಲ್ಲರೂ ಮುಖಗಳಿಗೆ ಬಣ್ಣ ಬಳಿದುಕೊಳ್ಳಲಾರಂಭಿಸಿದರು. ಆದರೆ ಮೇಳದವರ ಅಂತರಂಗದಲ್ಲಿ ಯಾವುದೋ ಅವ್ಯಕ್ತ ಭಯ ಆವರಿಸಿ, ಭಯದ ಮದ್ದಳೆ ಬಾರಿಸತೊಡಗಿತು!.

ಕಾಕೊಳು ರಾಮಯ್ಯ