ಸ್ವಾಗತ ದೊಂಬಿದಾಸರ ಇತಿಹಾಸಕ್ಕೆ

ದೊಂಬಿದಾಸ

ಸ್ನೇಹಿತರೆ,

ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಜಾತಿಗಳ ವಿಜೃಂಭಣೆ ಅತೀ ಹಳೆಯವಿಚಾರ, ಹೆಚ್ಚಿನ ಭಾರತೀಯರು ತಮ್ಮ ತಮ್ಮ ಜಾತಿಗಳಲ್ಲಿ ಗುರುತಿಸಿಕೊಂಡರೆ , ಇನ್ನುಳಿದವರು ಜಾತಿಯನ್ನು ಮೀರಿದಂತೆ ನಟಿಸಿ ಜಾತೀಯತೆಯನ್ನು ಪ್ರೋತ್ಸಾಹಿಸುತ್ತಾ ನಾಟಕವಾಡುತ್ತಿರುತ್ತಾರೆ. ಬೇರೆಲ್ಲಾ ಜಾತಿಯಂತೆ ನನ್ನ ಜಾತಿ ಕೂಡಾ ವಿಶಿಷ್ಟವಾಗಿದ್ದರೂ ಸಮಾಜದ ಜನರು ಸಂಕುಚಿತ ಮನೋಭಾವ ಹೊಂದಿರುವುದು, ಇನ್ನುಳಿದ ಜನಾಂಗಗಳಂತೆ ತಮ್ಮ ಇತಿಹಾಸವನ್ನು ಬರೆದಿಡುವ, ಸಂಗ್ರಹಿಸಿಡುವ ಮಹಾತ್ಕಾರ್ಯದ ಬದಲಾಗಿ ತಮ್ಮ ಜಾತಿಯ ಹೆಸರನ್ನು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುವ ಸ್ಥಿತಿ ಕೆಲಜನಾಂಗದ ವಿದ್ಯಾವಂತ ಜನ ನಿರ್ಮಾಣ ಮಾಡಿರುವುದು, ಜನಾಂಗದ ಕೆಲವು ಜನರು ಮೀಸಲಾತಿ ಕಾರಣಕ್ಕಾಗಿ ಬೇರೆ ಬೇರೆ ಜಾತಿಗಳನ್ನು ಆಶ್ರಯಿಸಿ ದೊಂಬಿದಾಸ ಜನಾಂಗದ ಇರುವಿಕೆಯನ್ನು ಇಲ್ಲವಾಗಿಸುವ ಪ್ರಕ್ರಿಯೆಯಲ್ಲಿ ನಿರತರರಾಗಿರುವುದು, ಮೊದಲಿನಿಂದಲೂ ಜಾತಿ ವ್ಯವಸ್ಥೆಯನ್ನು ವಿರೋಧ ಮಾಡುತ್ತಿದ್ದ ನನ್ನಂತವನು ಸಮುದಾಯದ ಬಗ್ಗೆ ಯೋಚಿಸುವಂತಾಗಿತ್ತು.

ಒಂದಷ್ಟು ಜನಾಂಗದ ವಿಚಾರವುಳ್ಳ ಲೇಖನಗಳನ್ನು ಓದಿ ಪ್ರಭಾವಿತನಾಗಿದ್ದ ನಾನು ನನ್ನ ಸಮಾಜದ ಇತಿಹಾಸದ ಬಗ್ಗೆ ಆಸಕ್ತಿಯಿಂದ ಹುಡುಕಾಟ ಪ್ರಾರಂಬಿಸಿದೆ. ಹುಡುಕಿದಷ್ಟು ವಿಷಯಗಳು ಸಿಗುತ್ತಾ ಹೋದಂತೆ ಈ ಎಲ್ಲಾ ವಿಷಯಗಳನ್ನು ಜನರ ಮುಂದಿಡುವ ಬಗ್ಗೆ ಯೋಚಿಸುವಂತಾಗಿತ್ತು. ಕರ್ನಾಟಕದ ಕಲೆಯ ರಾಯಭಾರಿಗಳಾಗಿದ್ದ ಜನಾಂಗವೊಂದು ತನ್ನಷ್ಟಕ್ಕೆ ತಾನೇ ಕಣ್ಮರೆಯಾಗುವ ಅಂತಕ್ಕೆ ಇಂದು ಬಂದು ನಿಂತಿದೆ. ಕಲೆಯನ್ನು ಬದುಕಾಗಿ ಸ್ವೀಕರಿಸಿದ್ದ, ಜನರನ್ನು ಮನರಂಜಸಿದ್ದ, ಜನರ ಬದುಕಿಗೆ ಮಾರ್ಗದರ್ಶಕರಾಗಿದ್ದ, ಹಿಂದು ಧರ್ಮಪ್ರಸಾರಕ್ಕೆ ತನ್ನನ್ನು ತಾನು ಸಮರ್ಪಿಸಿ ಕೊಂಡು ಅಲೆಮಾರಿಗಳಾಗಿ ಊರೂರು ತಿರುಗುತ್ತಾ , ತನ್ನ ಅಸ್ತಿತ್ವವನ್ನು ಕಳೆದುಕೊಂಡ ಜನಾಂಗವೊಂದರ ದಾಖಲೀಕರಣ ಮಾಡಬೇಕೆಂಬ ಅದಮ್ಯ ಬಯಕೆಯೊಂದಿಗೆ ಈ ಕೆಲಸವನ್ನು ನಿಮ್ಮೆಲ್ಲರ ಆಶಯದೊಂದಿಗೆ ಪ್ರಾರಂಭಿಸಿದೆ ಹಾಗೂ ಹೂತುಹೋಗಿರುವ ಸತ್ಯಗಳನ್ನು ನನ್ನಂತೆ ಮತ್ತಿತರರು ಸಂಗ್ರಹಿಸಬೇಕಾದ ಅವಶ್ಯವಿದೆ.

ಇಂದಿನ ಅಂತರ ಜಾಲಮಾದ್ಯಮ ಬೇರ್ಪಟ್ಟಿರುವ ಜನಾಂಗವನ್ನು ಒಟ್ಟುಮಾಡಬಹುದೆಂಬ ನಂಬಿಕೆ ಇದೆ, ಆದರೆ ಜಾಲತಾಣಕ್ಕೆ ಬೇಕಾಗುವ ವಿಷಯಗಳನ್ನು ಸಂಗ್ರಹಿಸುವ ವಿಚಾರದಲ್ಲಿ ಅತ್ಯಂತ ಕಷ್ಟಕರವಾಗಿತ್ತಾದರೂ ಸಾಧ್ಯವಾದಷ್ಟು ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಕೆಲವರು ಸ್ಪಂದಿಸಿದರು ಕೆಲವರು ನಕ್ಕರು.

ದೊಂಬಿದಾಸ ಒಂದು ಅದ್ಭುತ ಜನಾಂಗ ಎಂಬ ನಂಬಿಕೆ ನನ್ನದು ಆದರೆ ಇಂದು ಜನಾಂಗದ ಶ್ರೇಷ್ಠ ಕಲಾವಿದರನ್ನು, ಹಿಂದಿನ ದೊಂಬಿದಾಸರ ಬಗೆಗಿನ ಲೇಖನಗಳನ್ನು ಹುಡುಕುವುದು ಅತ್ಯಂತ ಕ್ಲಿಷ್ಟಕರ. ನನ್ನ ಮಿತಿಯೊಳಗೆ ಸಿಗಬಹುದಾದ ಸಾಧ್ಯವಾದಷ್ಟು ವಿಷಯಗಳನ್ನು ಸಂಗ್ರಹಿಸಿದ್ದೆನೆ. ಇಲ್ಲಿ ಪ್ರಕಟಿಸಿರುವ ವಿಚಾರಗಳು ಅತ್ಯಲ್ಪ, ಸಂಗ್ರಹಿಸಬೇಕಾಗಿರುವ ವಿಷಯಗಳು ಬಹಳಷ್ಟು ಇಂತಹ ಕಾರ್ಯಗಳು ಒಬ್ಬರಿಂದ ಆಗುವಂತಹವಲ್ಲ . ಜಾಲತಾಣ ಈಗಾಗಲೇ ಚಾಲ್ತಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ತಮಗೆ ಸಿಕ್ಕವಿಷಯಗಳನ್ನು ಸೇರಿಸಿಡಬಹುದಾಗಿದೆ.

ತಮ್ಮೆಲ್ಲರ ಆಶಯ ಹಾಗೂ ಪ್ರೀತಿಯಿಂದಾಗಿ ಈ ಚಿಕ್ಕಕೆಲಸವನ್ನು ಮಾಡಲು ಸಾದ್ಯವಾಗಿದೆ. ನನ್ನ ಅಜ್ಜ ಅಜ್ಜಿಯರು ಹಾಗೂ ಸಮಾಜದ ಏಳಿಗೆಗೆ ತುಡಿಯುತ್ತಿದ್ದ ನನ್ನ ಪೂರ್ವಿಕರನ್ನು ನೆನೆಯಲು ಈಸಂದರ್ಭದಲ್ಲಿ ಇಚ್ಚಿಸುತ್ತೇನೆ.

ನಿಮ್ಮ
ಟಿ ವಿ ಗೋಪಾಲಕೃಷ್ಣ