ಕುಪ್ಪೆ ನಾಗರಾಜ್ ಕಂಡಂತೆ ದೊಂಬಿದಾಸ

ದೊಂಬಿದಾಸರ ಚಾರಿತ್ರಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಬದುಕು

ಕರ್ನಾಟಕದ ವೃತ್ತಿ ಗಾಯಕ ಪರಂಪರೆಯಲ್ಲಿ ಅತ್ಯಂತ ಜನಪ್ರಿಯ ಲೌಕಿಕ ಗಾಯಕರೆಂದರೆ ದೊಂಬಿದಾಸರು, ಗಾಯನ ಸಂಪ್ರದಾಯದ ಜೊತೆಗೆ ಜನಪದ ರಂಗಭೂಮಿಗೂ ತಮ್ಮ ನಾಟಕ ಕಲೆಯಿಂದ ಅಪೂರ್ವವಾದ ಕೊಡುಗೆಯನ್ನಿತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಹರಿಕಥೆ ಮಾಡುವುದರಲ್ಲೂ ಎತ್ತಿದ ಕೈ ಈ ಎಲ್ಲಾ ಪ್ರಕಾರಗಳಿಂದ ಜನಪದರ ಹೃದಯಗೆದ್ದು ಬದುಕನ್ನು ಕಟ್ಟಿಕೊಂಡ ಅಲೆಮಾರಿ ಸಮುದಾಯವಿದು. ಕರ್ನಾಟಕದಲ್ಲಿ ಕಂಡುಬರುವ ವೃತ್ತಿ ಗಾಯಕರನ್ನು ಮೂರು ವರ್ಗಗಳಾಗಿ ಜೀಶಂಪರವರು ವಿಂಗಡಿಸಿದ್ದಾರೆ

1. ಧಾರ್ಮಿಕ ವೃತ್ತಿ ಗಾಯಕರು
2. ಲೌಕಿಕ ವೃತ್ತಿ ಗಾಯಕರು
3. ಅರೆ ವೃತ್ತಿ ಗಾಯಕರು

ದೊಂಬಿದಾಸರು ಲೌಕಿಕ ವೃತ್ತಿ ಗಾಯಕರ ಪರಂಪರೆಗೆ ಸೇರಿದವರು. ವೈವಿಧ್ಯಮಯ ವೇಷಭೂಷಣ, ವಿಶಿಷ್ಟಮಯವಾದ ವಾದ್ಯಗಳಿಂದ ಕೂಡಿದ ಸುದೀರ್ಘ ಕಾವ್ಯಗಳನ್ನು ವಿಶೇಷ ಮತ್ತು ಸಾಮಾನ್ಯ ಸಂದರ್ಭಗಳಲ್ಲಿ ಹಾಡುತ್ತಾರೆ. ವೈಷ್ಣವ ಮತಾವಲಂಬಿಗಳಾದ ಇವರು ವಿಷ್ಣು ಸಂಕೀರ್ತನೆಗಳನ್ನು ಹಾಡುತ್ತಾ ಜೊತೆಗೆ ಶೈವ ಸಂಪ್ರದಾಯ ಲೌಕಿಕ ಕಾವ್ಯಗಳನ್ನು, ತತ್ವಪದಗಳನ್ನು ಹಾಡುತ್ತಾರೆ. ವೈಷ್ಣವ ಸಂಪ್ರದಾಯದ ಭಿಕ್ಷಾ ವೃತ್ತಿಯನ್ನು ಪ್ರಧಾನ ಕಸುಬ ನ್ನಾಗಿಸಿಕೊಂಡಿರುವ ಇವರು ಜನಪದರ ನಾಲಿಗೆಯಲ್ಲಿ ಪ್ರಾದೇಶಿಕವಾಗಿ ದೊಂಬಿದಾಸರು / ಗಂಡು ದಾಸರು/ ಹೆಣ್ಣುವೇಷದವರು, ಕೋಲೆ ಬಸವ, ಗಂಗೆದ್ಲು, ತಿರುಮಲರದಾಸರು, ದಂಗದಾಸರು, ಗೋಪಾಲ ಬುಟ್ಟಿ ದಾಸರು, ಚೆನ್ನದಾಸರು, ಹೊಲೆಯದಾಸರ್, ಗರುಡಗಂಬ ದಾಸರು, ಚಕ್ರ ವಾದ್ಯ ದಾಸರು, ಮಾಲದಾಸರ್, ಕಾಶಿ ದಾಸ, ಶಂಖದಾಸರು, ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಾರೆ.

ನಾಡಿನ ಸಾಂಸ್ಕೃತಿಕ ರಾಯಭಾರಿಗಳಾದ ಈ ಸಮುದಾಯದ ಮೂಲ ಕುರಿತಂತೆ ದೇಶಿ ಮತ್ತು ವಿದೇಶಿ ವಿದ್ವಾಂಸರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ದಕ್ಷಿಣ ಭಾರತದ ಜಾತಿಗಳ ಬಗ್ಗೆ ಅಧ್ಯಯನ ನಡೆಸಿರುವ ಎಚ್ ವಿ ನಂಜುಂಡಯ್ಯ ಮತ್ತು ಅನಂತ ಕೃಷ್ಣ ಅಯ್ಯರ್ ಹಾಗೂ ಥರ್ಸ್ಟನ್ ರವರು ದಾಸರಿ ಹಾಗೂ ದೊಂಗದಾಸರಿ ಗಳನ್ನು ಎರಡು ಪ್ರತ್ಯೇಕ ಜಾತಿಗಳಾಗಿ ಪರಿಗಣಿಸಿರುವುದಾದರೂ, ದೊಂಬಿದಾಸರ ದಾಸರ ಜಾತಿಯನ್ನು ಪ್ರತ್ಯೇಕ ಜಾತಿ ಎಂದು ಸೂಚಿಸಿಲ್ಲ. ದೊಂಗದಾಸರ ಚೋರ ವೃತ್ತಿ ಇತರ ದಾಸರ ಸಾಮಾಜಿಕ ವೃತ್ತಿಗಳಿಗೆ ವ್ಯತಿರಿಕ್ತ ವಾಗಿರುವುದೇ ಇದಕ್ಕೆ ಕಾರಣ. ದಾಸರಿ ಜಾತಿಯ ಅನೇಕ ಉಪಜಾತಿಗಳಲ್ಲಿ ನಮ್ಮಿ ದಾಸರು ಒಂದು ಉಪಜಾತಿ, 1901 ರ ಜನಗಣತಿಯ ವರದಿಯಲ್ಲಿ ದಾಸರ ಸಮುದಾಯಕ್ಕೆ ಸೇರಿದ ಈ ಕೆಳಕಂಡ ಸ್ವಗೋತ್ರ ಪಂಗಡಗಳನ್ನು ಪಟ್ಟಿ ಮಾಡಲಾಗಿದೆ. ಗುಡಮದಾಸರಿ, ದೊಂಬಿದಾಸರು ಧರ್ಮದಾಸರು, ಶಂಖದಾಸರು, ಚಕ್ರ ವಾದ್ಯ ದಾಸರು ಇವುಗಳ ಜೊತೆಗೆ ಇರುವ ಸ್ವಗೋತ್ರ ಪಂಗಡ ಗಳೆಂದರೆ, ದೇಶಭಾಗ ದಾಸರು, ಕತ್ತರಿದಾಸರು, ಆಟದಾಸರು, ಬಿಂದಿಗೆದಾಸರು, ನಾಮಧಾರಿ ದಾಸರು, ಶನಿವಾರದಾಸರು, ಈ ಹೆಸರುಗಳು ನಿಜವಾಗಿ ವಿಭಿನ್ನ ಪಂಗಡಗಳನ್ನು ಪ್ರತಿನಿಧಿಸುತ್ತವೆ ಅಥವಾ ಸೂಚಿಸುತ್ತವೆಂದು ಹೇಳುವುದು ಸ್ಪಷ್ಟವಾಗಿಲ್ಲ ಎಂದು ಕ್ಕೆ ಅನಂತ ಕೃಷ್ಣ ಅಯ್ಯರ್ ಅಭಿಪ್ರಾಯಪಡುತ್ತಾರೆ. ಮುಂದುವರಿದು ಗುಂಪುಗಳಲ್ಲಿ ನರ್ತನ ಮಾಡುವುದರಿಂದಾಗಿ ಇವರನ್ನು ದೊಂಬಿದಾಸರೆಂದು ಕರೆಯಲಾಗಿದೆ. ಈ ಸಮುದಾಯದ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಕಳ್ಳ ಅಥವಾ ದೊಂಗ ಎಂಬ ಪದವು ಯಾವುದೇ ಅಪರಾಧ ಪ್ರವೃತ್ತಿಯನ್ನು ಅರ್ಥೈಸುವುದಿಲ್ಲ ಎಂದಿದ್ದಾರೆ.

ಇವರು ಇಡೀ ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿದ್ದು ಕರ್ನಾಟಕದ ಗಡಿ ಭಾಗಗಳಾದ ತಮಿಳುನಾಡಿನ ಉತ್ತರ ಅರ್ಕಾಟ್, ತಂಜಾವೂರು, ಮಧುರೈ ಮತ್ತು ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಪೆನುಕೊಂಡ ಜಿಲ್ಲೆಗಳಲ್ಲಿ ನೆಲೆಗಳನ್ನು ಗುರುತಿಸಿದೆ. ಮೂಲತಃ ಆಂಧ್ರಪ್ರದೇಶದವರಾದ ಈ ವೃತ್ತಿ ಗಾಯಕರು ವಿಜಯನಗರದ ಅರಸರ ಕಾಲದಲ್ಲಿ ದಕ್ಷಿಣ ಭಾರತದಾದ್ಯಂತ ಹರಡಿಕೊಂಡಂತೆ ಕಂಡುಬರುತ್ತದೆ.

ದೊಂಬಿದಾಸರು ವಿಜಯನಗರ ಅರಸ ಶ್ರೀ ಕೃಷ್ಣದೇವರಾಯನ ನಂಬಿಕಸ್ಥ ಗೂಢಾಚಾರರಾಗಿದ್ದರೆಂದು ರಾಜ್ಯಾಡಳಿತಕ್ಕೆ ಸಂಬಂಧಿಸಿದ ಗುಪ್ತ ಮಾಹಿತಿಗಳನ್ನು ಸಂಗ್ರಹಿಸಲು ಇವರು ಕಲಾವಿದರಾಗಿ ಊರೂರು ಅಲೆದು ಮಾಹಿತಿ ಸಂಗ್ರಹಿಸಿ ರಾಜ್ಯಾಡಳಿತಕ್ಕೆ ತಲುಪಿಸುತ್ತಿದ್ದರೆಂದು ನಂಬಲಾಗಿದೆ. ಹೀಗೆ ಸೈನಿಕರ ಮನರಂಜನೆ ಮತ್ತು ಗೂಢಾಚಾರ ಕೆಲಸ ಮಾಡುತ್ತಿದ್ದ ದಂಡಿನ ಜತೆ ಇರುತ್ತಿದ್ದ ದಂಡಿನದಾಸರೇ ಈ ದೊಂಬಿ ದಾಸರಾಗಿರುವ ಸಾಧ್ಯತೆ ಇದೆ. ಅಲ್ಲದೆ ಇವರು ಹಾಡಲು ಬಳಸುತ್ತಿದ್ದ ದಂಡಿಗೆ ಎಂಬ ವಾದ್ಯದಿಂದ ದಂಡಿಗೆ ದಾಸರಾಗಿದ್ದು ತರುವಾಯ ದಂಡಿನ ದಾಸರಾ ಗಿರಬಹುದು. ಅನಂತ ಕೃಷ್ಣ ಅಯ್ಯರ್ ಅವರು ಹೇಳುವಂತೆ ಏಕತಾರಿ ಯೊಡನೆ ಬೀದಿಯಲ್ಲಿ ಹಾಡಿಕೊಳ್ಳುತ್ತಾ ಭಿಕ್ಷೆ ಬೇಡುವಾಗ ಅವರ ಸಂಗೀತ ಬಹುಜನ ಜನರನ್ನು ಆಕರ್ಷಿಸುತ್ತಿದ್ದರಿಂದ, ಇವರು ದುಂಬಿಯಂತೆ ಬಹು ಮಧುರವಾಗಿ ಹಾಡುವುದರಿಂದ ಇವರನ್ನು “ದುಂಬಿದಾಸ” ರೆಂದು ಉಾಹಿಸುತ್ತಾರೆ ರೆವರೆಂಡ್ ಎಫ್ ಕಿಟ್ಟೆಲ್ ಅವರು ತಮ್ಮ A Kannada English Dictionary (1894 ) ರಲ್ಲಿ ದೊಂಬಿದಾಸರಿ One of a company of stage player (My) ಎಂದು ಅವರ ವೃತ್ತಿಯನ್ನಾಧರಿಸಿದ ಅರ್ಥ ವಿವರಣೆ ನೀಡಿದ್ದಾರೆ.

ಸಂಕ್ಷಿಪ್ತ ಕನ್ನಡ ನಿಘಂಟುವಿನಲ್ಲಿ ದೊಂಬಿದಾಸರು - ಊರೂರು ತಿರುಗುತ್ತ ಐತಿಹಾಸಿಕ, ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಾ ರಾತ್ರಿ ಹೊತ್ತು ಬಯಲುಗಳಲ್ಲಿ ನಾಟಕ ಹಾಡುವ ವೃತ್ತಿಯವರು ಎಂದಿದೆ. Encyclopaedia Asiatic Val.1 ರಲ್ಲಿ ದಾಸರಿಗಳನ್ನು ಕುರಿತು The Dasari A Mendicant Of Caste In South India A Worshipper Of Vishnu ಎಂದು ಹೇಳಿದ್ದಾರೆ ಕೆ ಎಸ್ ಸಿಂಗ ರವರ People of India Karnataka ಕೃತಿಯಲ್ಲಿ ದೊಂಬಿದಾಸರ ಪದಕ್ಕೆ ಪದನಿಷ್ಪತ್ತಿ ಅರ್ಥ ಹೀಗಿದೆ Dombi Was Prefixed To Their Orginal name because once while narrating sri Vishnu story a Dombi (Quarrel) broke out among them. Another version is that since they sing melodiously like a Dumbi (Honey bee) they are called Dombi dasaru (Paramashivaiah 1980) Edger Thurton ರವರ ಕ್ಯಾಸ್ಟ್ ಟ್ರೈಬ್ ಆಫ್ ಸೌತ್ ಇಂಡಿಯಾ ಕೃತಿಯಲ್ಲಿ ದಾಸರಿಗಳನ್ನು ವೈಷ್ಣವ ಮತಾವಲಂಬಿಗಳಾದ ವೈಷ್ಣವ ಭಿಕ್ಷುಕ ಸಮುದಾಯ ಎಂದಿದ್ದಾರೆ. ಮುಂದುವರಿದು they usually wander about singing rhymes to a monotonous accompaniment upon a leather instrument called toppai (tabret) ಎಂದು ವಿವರಿಸಿದ್ದಾರೆ.

ಗೆಜೆಟ್ ಆಫ್ ಅನಂತಪುರ ಡಿಸ್ಟಿಕ್ ನಲ್ಲಿ ಡಬ್ಲ್ಯೂ ಫ್ರಾನ್ಸಿಸ್ ವಿವರಿಸುವಂತೆ ಪ್ರಮುಖವಾಗಿ ಭಿಕ್ಷಾ ವೃತ್ತಿಯಿಂದ ಬದುಕುವವರು ದಾಸರುಗಳ ಎಂದಿದ್ದಾನೆ. The beggars who are most in evidence are they the Dasaris. ಎಚ್ ಎ ಸ್ಟುವರ್ಟ್ ರವರು the Dasari is a mendicant caste of Vishnu's ಎಂದಿದ್ದಾರೆ.

ದಾಸರಿ ಮೂಲಪುರುಷನ ಕುರಿತಂತೆ ಕೆ. ಅನಂತ ಕೃಷ್ಣ ಅಯ್ಯರ್ ಮತ್ತು ಎಚ್ ವಿ ನಂಜುಂಡಯ್ಯನವರು (ದಿ ಮೈಸೂರು ಟ್ರೈಬ್ ಆಂಡ್ ಕ್ಯಾಸ್ಟ್ Vol 1 ರಲ್ಲಿ) ದಾಸರಿ ಹಾಗೂ ದೊಂಬಿದಾಸರ ಮೂಲ ಪುರುಷನು ಏಕಾಂಗ ಸ್ವಾಮಿ ಎಂಬ ವೈಷ್ಣವ ಗುರುವಿನ ಬಣಜಿಗ ಶಿಷ್ಯನಿಗೂ ಮತ್ತು ಕುರುಬ ಹೆಂಗಸೊಬ್ಬಳಿಗೆ ಹುಟ್ಟಿದವನೆಂದು ತಿಳಿದು ಬರುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಎಚ್ ಎ ಸ್ಟುವರ್ಟ್ ಅವರ ಮತ್ತೊಂದು ಅಭಿಪ್ರಾಯದಂತೆ ದಾಸರು ಉತ್ತರ ಜಿಲ್ಲೆಯೊಂದರ ಸಿರಿವಂತ ಶೂದ್ರನ ಖ್ಯಾತ ವಂಶಜರು ಅವರಲ್ಲಿ ಒಬ್ಬನಿಗೆ ಮಕ್ಕಳಿರುವುದಿಲ್ಲ ತನಗೆ ಮಕ್ಕಳಾದರೆ ಅವರಲ್ಲಿ ಒಬ್ಬರನ್ನು ದೇವರ ಸೇವೆಗೆ ಅರ್ಪಿಸುವೆ ನೆಂದು ಬೇಡಿಕೊಂಡ. ಅನಂತರ ತನಗೆ ಹುಟ್ಟಿದ ಹಲವು ಮಕ್ಕಳಲ್ಲಿ ಒಬ್ಬನನ್ನು ದೇವರ ಸೇವೆಗೆಂದು ದಾಸ (ಸೇವಕ) ಎಂದು ಹೆಸರಿಟ್ಟು ದೇವರ ಸೇವೆಗೆ ಒಪ್ಪಿಸಿದನು. ಅಂದಿನಿಂದ ದಾಸ ತನ್ನ ತಂದೆಯ ಆಸ್ತಿಯಲ್ಲಿ ತನ್ನ ಪಾಲನ್ನು ಕಳೆದುಕೊಂಡ ನಲ್ಲದೇ ಆತನ ಮಕ್ಕಳು ಆ ಹಕ್ಕಿಗೆ ಎರವಾಗಿ ಭಿಕ್ಷುಕ ರಾದರು. ಅವರೆ ‘ದಾಸರೆಂದೆನಿಸಿದರು’ ಎಂದು ಅಭಿಪ್ರಾಯಪಟ್ಟಿರುವರು.

Manual Of Tanjore District ಪ್ರಕಾರ ಸಂಸ್ಕೃತ ದಾಸ ಎಂಬ ಶಬ್ದಕ್ಕೆ ತಮಿಳು ವಿಭಕ್ತಿ ಅನ್ ಸೇರಿಸಿ ದಾಸನ್ ಆಗುತ್ತದೆ. ಎಂದು ಹೇಳಿ, ವೈಷ್ಣವ ಭಿಕ್ಷುಕರಿಗೆ ಮಾತ್ರವೇ ಈ ಶಬ್ದ ಬಳಸಲಾಗುತ್ತೆಂದದು ಹೇಳಿದೆ.

ಸಂಸ್ಕೃತ ಗ್ರಂಥಗಳಲ್ಲಿ ದಾಸರನ್ನು ದಸ್ಯುಗಳೆಂದು ಕರೆಯಲಾಗಿದೆ. ಆರ್ಯರನ್ನು ಪ್ರತಿಭಟಿಸಿದ ದ್ರಾವಿಡರೆ ದಸ್ಯುಗಳು ಎಂಬ ವಿವರಣೆ ಇದೆ. ಕ್ರೂಕ್ ಎಂಬ ವಿದ್ವಾಂಸ, ಇವರು ಜಿಪ್ಸಿಯಂತಹಾ ಒಂದು ಜನಾಂಗ, ನೃತ್ಯಗಾರರು, ಅಟಾಡುವ, ರೂಪ ಜೀವಿಗಳಾದ ಜನಾಂಗ, ಈ ಜನಾಂಗದ ಉಗಮ ಎಲ್ಲಿ ಎಂಬುದಕ್ಕೆ ಇನ್ನೂ ನಿಶ್ಚಿತ ಅಭಿಪ್ರಾಯವಿಲ್ಲ ವೆಂದು ಪ್ರಸ್ತಾಪಿಸಿದ್ದಾರೆ (ಜನಪದ ಸಾಹಿತ್ಯ ದರ್ಶನ 86 ಬಿ.ವಿ. ಗುಂಜಶೆಟ್ಟಿ) ಕನ್ನಡ ನಾಡಿನ ವೃತ್ತಿ ಗಾಯಕ ಕಥೋಪ ಜೀವಿಗಳ ಪ್ರಥಮ ವಿವರಗಳನ್ನು ಕಳೆದ ಶತಮಾನದ ಮಧ್ಯಭಾಗದಲ್ಲಿ ಪ್ರಕಟವಾದ ಗ್ರೋವರ್ ರವರು ದಕ್ಷಿಣ ಭಾರತದ ಜನಪದ ಗೀತೆಗಳು The Folk Songs Of South India ಎಂಬ ಗ್ರಂಥದಲ್ಲಿ ದಾಸ ಎನ್ನುವ ಗಾಯಕರನ್ನು ಗುರ್ತಿಸಿದ್ದಾರೆ ಇವರು ಗಾಯನದ ಮೂಲಕ ಭಿಕ್ಷಾಟನೆ ಮಾಡುತ್ತಿದ್ದರು ಹಾಡುವುದನ್ನು ಬಿಟ್ಟರೆ ಬೇರೆ ವೃತ್ತಿ ತಿಳಿದಿರಲಿಲ್ಲ ವೆಂದು ಉಲ್ಲೇಖಿಸುತ್ತಾರೆ ದಾಸರು ತಂತಿ ವಾದ್ಯವನ್ನು ಹಿಡಿದು ರಾಮಾಯಣ ಮಹಾಭಾರತದ ಕತೆಗಳನ್ನು ಹೇಳುತ್ತಿದ್ದವರು. ಗ್ರೋವರ್ ಈ ವಾದ್ಯವನ್ನು ವೀಣೆ ಎಂದು ಕರೆದಿದ್ದಾರೆ.

ಕಳೆದ ಶತಮಾನದ ಉತ್ತರಾರ್ಧದಲ್ಲಿ ಪ್ಲೀಟರ್ ಸಂಗ್ರಹಿಸಿದ್ದ Indian Antiqury ಎಂಬ ಗ್ರಂಥದಲ್ಲಿ ದಾಸರನ್ನು ಜನಪದ ಗಾಯಕರು ಎಂದು ಗುರುತಿಸಿದ್ದಾರೆ. ಈ ದಾಸರು ಹೇಳುವ ಧಾರ್ಮಿಕ ಐತಿಹಾಸಿಕ ಹಾಗೂ ಭಕ್ತಿ ಪ್ರಧಾನವಾದ ಕಥೆಗಳನ್ನು ಕೇಳಲು ಬಹು ದೂರಗಳಿಂದ ಜನರು ಗುಂಪು ಗುಂಪಾಗಿ ಗಾಡಿಗಳಲ್ಲಿ ಬಂದು ಆಸಕ್ತಿಯಿಂದ ಕೇಳುತ್ತಿದ್ದರು. ಇದು ಅವರ ಜನಪ್ರಿಯತೆಗೆ ಸಾಕ್ಷಿ ಎಂದು ವಿವರಿಸಿದ್ದಾರೆ. ನರಗುಂದ ಬಂಡಾಯ, ಹಲಗಲಿಯ ಬೇಡರು ಮುಂತಾದ ಕೆಲವು ಲಾವಣೆಗಳನ್ನು ಪ್ಲೀಟರ್ ದಾಸರಿಂದ ಸಂಗ್ರಹಿಸಿರುವುದಾಗಿ ಹೇಳಿಕೊಂಡಿದ್ದಾರೆ .

ಉತ್ತರ ಕರ್ನಾಟಕದ ವೃತ್ತಿ ಗಾಯಕರ ಕಥಾ ಪ್ರಕಾರಗಳನ್ನು ಸಾಕಷ್ಟು ಕ್ರಮಬದ್ಧವಾಗಿ ಪರಿಚಯಿಸಿರುವ ಬಿ.ವಿ. ಮಹಿಶವಾಡಿ ಅವರು ತಮ್ಮ ಕಿರುವತ್ತಿಗೆ ಜಾನಪದ ಕಥಾ ಸೃಷ್ಟಿಯಲ್ಲಿ ಈ ದಾಸರ ಕತೆಗಳೇ ದೊಂಬಿದಾಸರ ಕಥೆಗಳು ಎಂಬುದನ್ನು ಮೊದಲ ಬಾರಿಗೆ ಸ್ಪಷ್ಟಪಡಿಸಿದ್ದಾರೆ.

ಈ ಎಲ್ಲಾ ಅಭಿಪ್ರಾಯಗಳ ಹಿನ್ನೆಲೆಯನ್ನು ಗಮನಿಸಿದಾಗ ದಾಸರಿ ಎನ್ನುವುದು ಯಾವುದೇ ಒಂದು ವಿಶಿಷ್ಟ ಜಾತಿಯನ್ನು ಸೂಚಿಸದೆ ಕೆ. ಅನಂತ ಕೃಷ್ಣನ್ ಅಯ್ಯರ್ ಹೇಳುವಂತೆ, ಬ್ರಾಹ್ಮಣೇತರ ಯಾವುದೇ ಜಾತಿಯವರು ದಾಸರಿ ಗಳಾಗಿರಬಹುದು. ಅಂದರೆ ಬಣಜಿಗ, ಕುರುಬ, ಒಕ್ಕಲಿಗ, ಸಾಲೆ, ತಿಗಳ, ಗೊಲ್ಲ , ಬೇಡ, ಬೆಸ್ತ , ವಡ್ಡ, ಓಲೆಯ, ಮಾದಿಗ ಮೊದಲಾದ ಜಾತಿಗಳಿಂದ ಬಂದವರು ದಾಸರಿಗಳಾದಂತಿದೆ

ವೃತ್ತಿ

ದೊಂಬಿದಾಸರನ್ನು ಲೌಕಿಕ ವೃತ್ತಿ ಗಾಯಕರು ವೈಷ್ಣವ ಭಿಕ್ಷುಕರೆಂದು ಗುರುತಿಸುತ್ತಾರೆ. ಒಂದು ಕಾಲದಲ್ಲಿ ಬಯಲಾಟಕ್ಕೆ ಹೆಸರುವಾಸಿಯಾಗಿದ್ದ ಸಮುದಾಯ ಇತ್ತೀಚೆಗೆ ಲಾವಣಿಗಾಯನ ತತ್ವಪದಗಳು ಹರಿ ಕತೆಯಂತೆ ವಿವಿಧ ಪ್ರಕಾರಗಳನ್ನು ಹೇಳಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಭಿಕ್ಷಾ ವೃತ್ತಿಯೇ ಇವರ ಜೀವನ ನಿರ್ವಹಣೆಗೆ ಪ್ರಧಾನ ಕಸುಬಾಗಿತ್ತು. ಒಂದು ಕಡೆ ನೆಲೆ ನಿಂತ ಸಮುದಾಯ ಇದಾಗಿರಲಿಲ್ಲ. ನಿರಂತರ ಸಂಚಾರ ಮಾಡುತ್ತಾ ತಲೆಯೊಳಗೆ ನೂರಾರು ಲಾವಣಿಗಳು ತತ್ವಪದಗಳು ದಾರ್ಶನಿಕರ ನುಡಿಗಟ್ಟುಗಳು ರಾಮಾಯಣ ಮಹಾಭಾರತದ ಪ್ರಸಂಗಗಳನ್ನು ತುಂಬಿಕೊಂಡು ತಮ್ಮ ಮೌಖಿಕ ಪರಂಪರೆಯಲ್ಲಿ ಸರಳ ವಾದ್ಯಗಳಾದ ಏಕತಾರಿ ದಮ್ಮಡಿ ಚಿಟಿಕೆ ತಾಳ ತಬಲ ಹಾರ್ಮೋನಿಯಂ ಕಂಜರ ಮದ್ದಳೆ ಇತ್ಯಾದಿ ವಾದ್ಯಗಳನ್ನು ಬಳಸಿ ಹಾಡುತ್ತಾ ಭಿಕ್ಷೆ ಬೇಡಿ ಬದುಕುತ್ತಿದ್ದರು ಇದು ಅವರ ಪ್ರಮುಖ ವೃತ್ತಿಯಾಗಿತ್ತು ಏಕತಾರಿಯನ್ನು ಝೇಂಕರಿಸಿ ಮೀಟುತ್ತಾ ದೊಡ್ಡ ಧ್ವನಿಯಲ್ಲಿ ಗಂಗೆ ಗೌರಿ, ಮಾದೇಗೌಡ, ಕೆಂಪೇಗೌಡ, ಬಾಲನಾಗಮ್ಮ ಅಣ್ಣ ತಂಗಿ, ತತ್ತ್ವಪದಗಳು ಮುಂತಾಗಿ ಹಾಡುತ್ತಾ ಹೊರಟರೆಂದರೆ ಹಳ್ಳಿಗಾಡಿನ ಜನ ಇವರ ಮಧುರ ಕಂಠಕ್ಕೆ ಮನಸೋತು ಮೊರದ ತುಂಬ ಬೊಗಸೆ ತುಂಬ ದವಸ ಧಾನ್ಯಗಳನ್ನು ನೀಡುತ್ತಿದ್ದರು

ದೊಂಬಿದಾಸರು ಬಯಲಾಟ, ಯಕ್ಷಗಾನದ ಮೂಲ ಪುರುಷರೆಂದರೂ ತಪ್ಪಾಗಲಾರದು. ಇವರ ಆಡುತ್ತಿದ್ದ ಪ್ರಮುಖವಾದ ಬಯಲಾಟಗಳು ಸತ್ಯಹರಿಶ್ಚಂದ್ರ, ಪ್ರಹ್ಲಾದ ಚರಿತ್ರೆ ಶಿವ ಮಹಾತ್ಮೆ, ರಾಜ ಸತ್ಯವೃತ್ತ. ಕೃಷ್ಣ ಪಾರಿಜಾತ, ನಳಚರಿತ್ರೆ, ಕಂಸವಧೆ, ಗಿರಿಜಾ ಕಲ್ಯಾಣ, ಕರಿಬಂಟನ ಕಾಳಗ, ಪ್ರಮೆ ಸತ್ಯ ಭೋಜ, ಗಂಗೆ ಗೌರಿ, ಮಾರ್ಕಂಡೇಯ, ಸಾರಂಗದ, ಚಿತ್ರಕೇತು ಮಹಾರಾಜ, ಭೂಕೈಲಾಸ, ಸತಿ ಸಕ್ಕುಬಾಯಿ, ನಲ್ಲ ತಂಗ, ಕನಕಾಂಗಿ ಕಲ್ಯಾಣ, ಶಾಂಭವಿ ಚರಿತ್ರೆ, ಯಲ್ಲಮ್ಮನ ಕಥೆ, ಪಾರಿಜಾತ, ಚಂದ್ರಹಾಸ, ರೇಣುಕೆ ಎಲ್ಲಮ್ಮ, ಜೋಕುಮಾರನ ಕಥೆ ಇತ್ಯಾದಿ.

ದಾಸರು ಊರಿಗೆ ಬಂದಿದ್ದಾರೆಂದರೆ ಹಳ್ಳಿಗರಿಗೆ ಸಂಭ್ರಮವಾಗುತ್ತಿತ್ತು. ದಾಸರ ಮುಖಂಡರನ್ನು ಕರೆಯಿಸಿ ವೀಳ್ಯ ಕೊಟ್ಟು ರಾತ್ರಿ ಬಯಲಾಟ ಆಡುವಂತೆ ಹೇಳುವುದು ವಾಡಿಕೆಯಾಗಿತ್ತು. ಹೊಸ ಊರುಗಳಾದರೆ ಇವರೆ ಆ ಊರಿನ ಗೌಡ, ಪಟೇಲ, ಶಾನುಭೋಗರಲ್ಲಿ ತೆರಳಿ ನಾಟಕ ಆಡಿಸುವಂತೆ ಕೇಳಿ ವೀಳ್ಯ ಪಡೆದು, ಅಂದು ರಾತ್ರಿಯೇ ನಾಟಕ ಮಾಡುತ್ತಿದ್ದರು ಅಂದಿನ ಕಾಲದಲ್ಲಿ ಹಳ್ಳಿಗಾಡಿನ ಜನತೆಗೆ ಮನರಂಜನೆ ಮತ್ತು ಸಂಸ್ಕೃತಿಯ ಪರಿಚಯವಾಗುತ್ತಿದ್ದು ಈ ದೊಂಬಿದಾಸ ರಿಂದಲೇ ರಾತ್ರಿ ದಾಸರು ನಾಟಕ ಆಡುವ ವಿಷಯವನ್ನು ಸುತ್ತಮುತ್ತಲ ಊರುಗಳಿಗೆ ಡಂಗೂರ ಸಾರಿಸಿ ಹೇಳುತ್ತಿದ್ದರು ವಿಷಯ ತಿಳಿದ ಹಳ್ಳಿಗರು ಗಾಡಿಗಳಲ್ಲಿ ರಾತ್ರಿ ನಾಟಕ ನೋಡಲು ಬರುತ್ತಿದ್ದರು ಇವರಾಡುವ ನಾಟಕಗಳಿಗೆ ಅಷ್ಟೊಂದು ಪ್ರಾಮುಖ್ಯತೆ ಇರುತ್ತಿತ್ತು.

ನಾಟಕಕ್ಕೆ ಬೇಕಾದ ಎಲ್ಲಾ ಪರಿಕರಗಳು ಇವರಲ್ಲಿ ಇರುತ್ತಿರಲಿಲ್ಲ ಇವರಲ್ಲಿ. ಒಂದೆರಡು ಹಳೆಯ ಪರದೆಗಳು ಕಿರೀಟ ಭುಜಕೀತಿ ಕತ್ತಿ ರಾಜನ ಪಾತ್ರಕ್ಕೆ ಬೇಕಾದ ಕೆಲವು ಆಭರಣಗಳು ಇರುತ್ತಿದ್ದವು. ರಾಣಿಯ ಪಾತ್ರಕ್ಕೆ ಬೇಕಾದ ಒಳ್ಳೆಯ ಸೀರೆಗಳನ್ನು ಆ ಹಳ್ಳಿಯವರಿಂದಲೇ ಕೇಳಿ ಪಡೆದು ಅಲಂಕಾರ ಮಾಡಿಕೊಳ್ಳುತ್ತಿದ್ದರು . ಆ ಊರಿನಲ್ಲಿನ ಸುಂದರ ಸೀರೆಗಳು ಈ ದಾಸರ ಮೈಮೇಲೆ ಆ ರಾತ್ರಿ ರಂಜಿಸುತ್ತಿದ್ದವು. ಅಂದಿನ ಕಾಲದಲ್ಲಿ ವಿದ್ಯುತ್ ದೀಪಗಳು ಇರಲಿಲ್ಲ. ವೇದಿಕೆಯ ಎರಡು ಬದಿಗಳಲ್ಲಿ ದೊಡ್ಡದಾದ ಎರಡು ಬಾಳೆ ಕಂಬ ಅಥವಾ ಇತರೆ ಯಾವುದಾದರೂ ಕಂಬ ನೆಡುತ್ತಿದ್ದರು, ಅದರ ಮೇಲೆ ಮಣ್ಣಿನ ಹರಿವಾಣವಿಟ್ಟು ಎಣ್ಣೆ ಹಾಕಿ ದೀಪ ಉರಿಸುತ್ತಿದ್ದರು. ಇಲ್ಲವೇ ದೊಂದಿಗಳನ್ನು ಹಚ್ಚಿ ಆಟಕ್ಕೆ ಬೇಕಾದ ಬೆಳಕನ್ನು ಪಡೆಯುತ್ತಿದ್ದರು.

ಇಡೀ ರಾತ್ರಿ ಕುಳಿತ ಜನ ಮಿಸುಕಾಡದಂತೆ ಇವರು ಅಭಿನಯಿಸುತ್ತಿದ್ದ ನಾಟಕಗಳನ್ನು ನೋಡುತ್ತಿದ್ದರು . ಇವರ ನವರಸ ಭರಿತ ನಾಟಕಗಳು ಜನರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಈ ದಾಸ ಆಟ ಕುರಿತಂತೆ ಒಂದು ನಾಣ್ಣುಡಿ ಇದೆ. ದಾಸರ ಆಟ ಆಟವಲ್ಲ ದೋಸೆ ಊಟವಲ್ಲ , ಇಷ್ಟೊಂದು ಶ್ರೀಮಂತ ಕಲಾ ಸಂಪತ್ತು ಕಲಾ ನೈಪುಣ್ಯತೆ ಇದ್ದು ಸಹ ಸಮುದಾಯವೊಂದು ನಗೆಪಾಟಲಿಗೆ ಒಳಗಾಗಬೇಕಾಗಿರುವುದು ದುರಂತವೆ ರಾತ್ರಿಯೆಲ್ಲಾ ರಾಜ ರಾಣಿ ವಿದೂಷಕರಾಗಿ ಮೆರೆದ ಇವರು ಬೆಳಗಾಗುತ್ತಲೇ ಭಿಕ್ಷುಕರಾಗಿ ಮನೆಮನೆಗೆ ಜೋಳಿಗೆ ಹಾಕಿಕೊಂಡು ಬಂದಿದ್ದನ್ನು ನೋಡಿ ಕನಿಕರವೋ ಸಂಭ್ರಮವೋ ಅಭಿಮಾನವೋ ಪಡುತ್ತ. ಅವರ ಪಾತ್ರಗಳನ್ನು ಹೊಗಳುತ್ತಾ ಮೊರದ ತುಂಬಾ ದವಸ ಧಾನ್ಯಗಳನ್ನು ತುಂಬಿ ಕೊಡುತ್ತಿದ್ದರು ಈ ಸಂದರ್ಭದಲ್ಲಿಯೇ ತಮಗೆ ತೊಡಲು ಬೇಕಾದ ಬಟ್ಟೆ ಬರೆಗಳನ್ನು ಸಹ ಜನರಿಂದ ಕೇಳಿ ಪಡೆದು ಕೊಳ್ಳುತ್ತಿದ್ದರು.

ಶುಭ ಅಶುಭ ಎಲ್ಲ ಕಾರ್ಯಗಳಿಗೂ ಇವರ ಹಾಡು ಕತೆಗಳು, ಬಯಲಾಟಗಳು ಪ್ರಮುಖವಾಗಿ ಇರಲೇಬೇಕಿತ್ತು. ಈ ದಾಸರೇ ಅಂದು ಮನರಂಜನೆಯ ಸಾಂಸ್ಕೃತಿಕ ಕೇಂದ್ರಬಿಂದುವಾಗಿರುತ್ತಿದ್ದರು.

ಉಚ್ಛಾಯ ಸ್ಥಿತಿಯಲ್ಲಿದ್ದ ಇವರ ಪಾರಂಪರಿಕ ಕಸುಬು ನಾಗರಿಕತೆ ಬೆಳೆದಂತೆ ವೈಜ್ಞಾನಿಕ ಆವಿಷ್ಕಾರಗಳು ಸಂಶೋಧನೆಯಾದಂತೆ ಸಿನಿಮಾ ರೇಡಿಯೋ ಟಿವಿಯಂತಹ ಪ್ರಭಾವಿ ಮಾಧ್ಯಮಗಳು ತನ್ನ ಕಬಂಧ ಬಾಹುಗಳನ್ನು ಚಾಚಿದಂತೆ ಪಾರಂಪರಿಕ ಕಸುಬಿಗೆ ಕುತ್ತುಂಟಾಗತೊಡಗಿತು. ಜೊತೆಗೆ ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿ ಪ್ರದರ್ಶನಗೊಳ್ಳುತ್ತಿದ್ದ ಕಂಪನಿ ನಾಟಕಗಳು ಅವುಗಳ ಬಣ್ಣ ಬಣ್ಣದ ಸೀನರಿ ವಿದ್ಯುತ್ ದೀಪದ ಬೆಳಕು ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ರಂಗುರಂಗಾದ ಲಲನಾಮಣಿಯರ ಅಂದ ಚೆಂದ ವೈಯ್ಯಾರ ಗಳ ಮುಂದೆ ದೊಂಬಿದಾಸರ ಪಾರಂಪರಿಕ ಬಯಲಾಟಗಳು ಹಾಡ್ಗತೆಗಳು ಲಾವಣಿಗಳು ತತ್ತ್ವಪದಗಳು ಕೇಳುಗರಿಲ್ಲದೆ ಬಡವಾಗಿದೆ. ಇದನ್ನೇ ನಂಬಿ ಬದುಕುತ್ತಿದ್ದ ಸಮುದಾಯಕ್ಕೆ ಜೀವನ ನಿರ್ವಹಣೆ ತುಂಬಾ ಕಷ್ಟವಾಗತೊಡಗಿತು.

ದಾಸರಟದ ಜನಪ್ರಿಯತೆ ಎಷ್ಟಿತ್ತು ಎಂಬುದಕ್ಕೆ ಒಂದು ಕತೆಯುಂಟು ಕ್ರಿ.ಶ. 1021 ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಅಕ್ಕಮ್ಮ ರಾಜ್ಯವಾಳುತ್ತಿದ್ದು ಅನಂತರ ಹಾಳಾದ ಈ ಪಟ್ಟಣದಲ್ಲಿ ದೆವ್ವಗಳು ವಾಸವಾಗಿದ್ದವಂತೆ. ಒಮ್ಮೆ ಒಂದು ದಾಸರಾಟ ತಂಡ ಅಲ್ಲಿಂದ ಹಾದು ಹೋಗುವಾಗ ಅಲ್ಲಿರುವ ದೆವ್ವಗಳು ಮನುಷ್ಯರೂಪ ತಾಳಿ ಆ ತಂಡದವರನ್ನು ಆಟವಾಡಲು ವಿನಂತಿಸಿದವಂತೆ. ಬೆಳಗಾಗುತ್ತಲೇ ನೋಡುತ್ತಾ ಕುಳಿತ ಮನುಷ್ಯರ ಮುಖಗಳು ವಿಕಾರ ಮುಖಗಳಾಗಿ ಮಾರ್ಪಾಡತೊಡಗಿದವಂತೆ. ಅದನ್ನು ಕಂಡ ಆಟದವರು ಮಡಿದರಂತೆ. ಆದರೆ ಅಲ್ಲಿದ್ದ ದಾಸರಟದ ಮುಂದಾಳು ಹಾಗೂ ಒಬ್ಬ ನಟ ಬದುಕಿ ಉಳಿದು ಬಂದರಂತೆ. ಆಟ ಆಡಲು ಕೇಳಿದವರು ಆಟ ನೋಡಿದವರೂ ಮನುಷ್ಯರಾಗಿರದೇ ಭೂತ ವಾಗಿದ್ದರು ಅಂದರೆ ಭೂತ ಪ್ರಪಂಚಕ್ಕೂ ದಾಸರ ಆಟ ಇಷ್ಟವಾಗಿತ್ತೆಂಬುದು ವೇದ್ಯವಾಗುತ್ತದೆ (ಜಾನಪದ ದರ್ಶನ 96-97)

ಊರಲ್ಲಿ ಮನೆಯಿಲ್ಲ, ಕಾಡಲ್ಲಿ ಒಲವಿಲ್ಲದ ಸ್ಥಿತಿ ಇವರದು ಪ್ರಾರಂಭದಲ್ಲಿ ವ್ಯವಸಾಯದ ಗಂಧ ಗಾಳಿ ತಿಳಿದಿರಲಿಲ್ಲ ಅನಿವಾರ್ಯವಾಗಿ ಸಮುದಾಯ ಅಲ್ಲಲ್ಲಿ ನೆಲೆ ನಿಲ್ಲಲು ಪ್ರಾರಂಭಿಸಿತ್ತು ನೆಲೆ ನಿಂತ ಕಡೆ ಸರ್ಕಾರಿ ಭೂಮಿ ಪಡೆದು ರೈತಾಪಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಈ ಪ್ರಮಾಣ ತೀರಾ ಕಡಿಮೆ. ಜೀವನ ನಿರ್ವಹಣೆಗಾಗಿ ಯುವಕರು ಮತ್ತು ಮಹಿಳೆಯರು ರೈತಾಪಿ ಜನಗಳ ಒಲೆ ಗದ್ದೆಗಳಲ್ಲಿ ಕೃಷಿ ಕಾರ್ಮಿಕರಾಗಿ, ಕೆಲವು ಕಡೆ ಜೀತಗಾರರಾಗಿ ದುಡಿಯತೊಡಗಿದರು. ಕೆಲವರು ತಾವು ಕಲಿತ ಕೈ ಕೆಲಸಗಳಾದ ತಬಲ ರಿಪೇರಿ, ಹಾರ್ಮೋನಿಯಂ ರಿಪೇರಿ, ಪಿಟೀಲು , ಹಳೆ ಛತ್ರಿ, ಫೋಟೋ ,ಬೀಗ ರಿಪೇರಿ ,ಬಳೆ ವ್ಯಾಪಾರ ಮಾಡುತ್ತಾ ತಮ್ಮ ಅಲೆಮಾರಿ ಜೀವನವನ್ನು ಹಾಗೇಯೇ ಮುಂದುವರಿಸಿದರು, ಹೊಲಗದ್ದೆಯಲ್ಲಿ ದುಡಿಯಲು ಗೊತ್ತಿಲ್ಲದ ಮಹಿಳೆಯರು ಊರೂರು ಅಲೆದು ಟೇಪು ಪಿನ್ನು, ಸ್ನೋ ಪೌಡರ್ ವ್ಯಾಪಾರ ಮಾಡುತ್ತಾ ಟೇಪು ಪಿನ್ನುಗಳನ್ನು ಕೊಟ್ಟು ಬೇಡವಾದ ಕೂದಲನ್ನು ಸಂಗ್ರಹಿಸುತ್ತಾರೆ. ಕೂದಲು ಸಂಗ್ರಹಿಸುವ ಕೆಲಸ ತುಂಬ ತ್ರಾಸದಾಯಕ ಕನಿಷ್ಠ 1/2 ಕೆಜಿಯಷ್ಟು ಕೂದಲನ್ನು ಸಂಗ್ರಹಿಸಲು ವಾರ ತಿಂಗಳುಗಟ್ಟಲೆ ನೂರಾರು ಮನೆಗಳನ್ನು ಸುತ್ತಬೇಕು. ಈ ಸುತ್ತುವ ಅಲೆಮಾರಿತನ ಇವರ ಜನ್ಮಕ್ಕೆ ಅಂಟಿಕೊಂಡ ಶಾಪ

ಸಾಹಿತ್ಯ

ದೊಂಬಿದಾಸರ ಸಾಹಿತ್ಯ ಮೌಖಿಕ ನೆಲೆಯದ್ದು ಮೂಲದಲ್ಲಿ ತೆಲುಗರಾದರೂ ಕನ್ನಡ ನಾಡಿನಲ್ಲಿ ನೆಲೆ ನಿಂತ ಮೇಲೆ ಕನ್ನಡವನ್ನು ಚೆನ್ನಾಗಿ ಕಲಿತು ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಿ ಬಯಲಾಟ ಲಾವಣಿ ತತ್ವಗಳನ್ನು ರಚಿಸಿ ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ಪ್ರಚಾರ ಪಡಿಸಿದ್ದಾರೆ.

ಜೀಶಂಪರವರು ಗುರುತಿಸಿರುವಂತೆ ದೊಂಬಿದಾಸರು ಹಾಡುವ ಕೆಲವು ಮುಖ್ಯ ಕಾವ್ಯಗಳನ್ನು ಈ ರೀತಿ ವಿಂಗಡಿಸಬಹುದು.

ಶಿವ ಕಥೆಗಳು : 1) ಶ್ರೀ ಗೌರಿ ಮದುವೆ 2) ಗಂಗೆ ಗೌರಿ ಜಗಳ 3) ಗಂಗೆ ಗೌರಿ ವಾದ 4) ಗಂಗೆ ಗೌರಿ ಸವಾಲು

ಕೃಷ್ಣ ಕಥೆಗಳು: 1) ಶ್ರೀ ಕೃಷ್ಣ ಕೊರವಂಜಿ 2) ಶ್ರೀಕೃಷ್ಣ ಪಾರಿಜಾತ

ರಮ್ಯಾ ಲಾವಣಿಗಳು: 1) ಪ್ರೇಮ ಸತ್ಯ ಭೋಜ 2) ಬಾಲನಾಗಮ್ಮ 3) ಬಸವಕುಮಾರ 4) ಲೋಹಿತಕುಮಾರ 5) ಬಂಜೆ ಹೊನ್ನಮ್ಮ

ವಾಸ್ತವಿಕ ಲಾವಣಿಗಳು: 1)ತಟವಾಣಿ ಹೆಣ್ಣು 2) ಅತ್ತೆ ಸೊಸೆ 3) ಮಾರೇಗೌಡ (ಕೊ ಣವೇ ಗೌಡ) 4) ಘಾತುಕ ಅಣ್ಣಯ್ಯ 5) ಧರ್ಮರಾಯ 6) ಕರ್ಮರಾಯ 7) ಕಲಿಯುಗ ಬಾಲೆ

ಐತಿಹಾಸಿಕ ಲಾವಣೆ ಈ ಪ್ರಕಾರದಲ್ಲಿ ಪ್ರಮುಖವಾದವು ಮಾಗಡಿ ಕೆಂಪೇಗೌಡ , ಕಿತ್ತೂರು ರಾಣಿ ಚೆನ್ನಮ್ಮ, ಮುಂಡರಗಿ ಭೀಮರಾಯ, ನರಗುಂದ ಬಂಡಾಯ ಮತ್ತು ಸ್ವಾತಂತ್ರ್ಯ ಸಂಗ್ರಾಮ ಕುರಿತಂತೆ ಹತ್ತು ಹಲವು ಲಾವಣಿಗಳು ರಚಿಸಿ ಹಾಡಿ ಪ್ರಚಾರ ಮಾಡಿದ್ದಾರೆ. ಫ್ಲೀಟ್ ರವರು ಸಂಗ್ರಹಿಸಿರುವ ನರಗುಂದ ಬಂಡಾಯ ಲಾವಣಿಗಳು ದೊಂಬಿದಾಸರು ಹಾಡಿದ ವೆಂದು ತಿಳಿದುಬಂದಿದೆ ಜೊತೆಗೆ ನಾಡಿನ ದಾಸರೇಣ್ಯರ ಮತ್ತು ದಾರ್ಶನಿಕರ ತತ್ವ ಪದಗಳನ್ನು ವಚನಗಳನ್ನು ಹಾಡುತ್ತಾರೆ.

ದೊಂಬಿದಾಸರು ಹಾಡುವ ಎಲ್ಲಾ ಲಾವಣಿಗಳಲ್ಲಿ ಸಾಮಾನ್ಯ ಜನರ ದುಃಖದುಮ್ಮಾನಗಳು, ಆಸೆ ಆಕಾಂಕ್ಷೆಗಳು, ನೀತಿ ಬೋಧನೆಗಳು ಹಾಸು ಹೊಕ್ಕಾಗಿರುತ್ತವೆ.

ಭಾಷೆ

ಕರ್ನಾಟಕದಲ್ಲಿ ನೆಲೆ ನಿಂತ ಮೇಲೆ ಕನ್ನಡ ಭಾಷೆಯನ್ನು ಕಲಿತು ಎಲ್ಲ ಪ್ರಕಾರದ ಕಾವ್ಯಗಳನ್ನು ಹಾಡಿ ಸಾಂಸ್ಕೃತಿಕ ವೃತ್ತಿ ಗಾಯಕರಾಗಿ ಜನಪ್ರಿಯರಾಗಿದ್ದಾರೆ. ಇವರ ಮಾತೃಭಾಷೆ ತೆಲುಗು. ಜೊತೆಗೆ ಕನ್ನಡದ ಉಪಭಾಷೆಯಾಗಿ ತೆಲುಗು ಕನ್ನಡ ಭಾಷಿಕರಿಗೆ ಅರ್ಥವಾಗದ ಮರುಗು ಭಾಷೆ (coded language ) ಮಾತನಾಡುತ್ತಾರೆ.

ಇದು ಹಳೆಯ ತಲೆಮಾರಿನ ನಡುವೆ ಈಗಲೂ ಚಾಲ್ತಿಯಲ್ಲಿದ್ದು ಲಿಪಿ ಇಲ್ಲದ ಭಾಷೆಯಾಗಿದೆ. ಆಧುನಿಕತೆಯ ದುಷ್ಪರಿಣಾಮ ಮತ್ತು ಯುವ ಜನಾಂಗ ಈ ಭಾಷಾ ಪ್ರಯೋಗದಿಂದ ದೂರವುಳಿದ ಕಾರಣ ಪ್ರೋತ್ಸಾಹವಿಲ್ಲದೆ ಇಂದು ದೊಂಬಿದಾಸರ ಮರುಗು ಭಾಷೆ ಕ್ಷೀಣಿಸುತ್ತಾ ಬಂದಿದೆ. ಈ ಭಾಷೆ ಸಮುದಾಯದ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಲ್ಲಿ ಮತ್ತು ತಮ್ಮ ಅಲೆಮಾರಿ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ತಮ್ಮ ರಕ್ಷಣೆಗಾಗಿ ಅನ್ಯ ಭಾಷಿಕರಿಗೆ ಅರ್ಥವಾಗದಿರಲೆಂದು ತನ್ನೊಳಗೆ ರಹಸ್ಯವಾಗಿ ಸಂಭಾಷಿಸಿ ಕೊಳ್ಳಲು ರೂಪಿತ ಗೊಂಡಿತ್ತು.

ಈ ಮರುಗು ಭಾಷೆಯನ್ನು ಕನ್ನಡ ತೆಲುಗು ಇತ್ಯಾದಿ ಭಾಷೆಗಳು ನಡುವೆ ಬಿಡಿ ಬಿಡಿ ಪದಗಳ ರೂಪದಲ್ಲಿ ಇಲ್ಲವೇ ಪೂರ್ಣ ವಾಕ್ಯಗಳ ರೂಪದಲ್ಲಿ ಬಳಸುತ್ತಿದ್ದರು. ಒಟ್ಟಿನಲ್ಲಿ ಈ ಭಾಷೆ ಬೇರೆಯವರಿಗೆ ಅರ್ಥವಾಗದ ರೀತಿಯಲ್ಲಿ ಪ್ರಯೋಗಿಸಲಾಗುತ್ತಿತ್ತು. ಈ ಭಾಷೆಯ ಕೆಲವು ಪದಪುಂಜಗಳನ್ನು ಉದಾಹರಣೆಗಾಗಿ ಇಲ್ಲಿ ದಾಖಲಿಸಿದೆ.

ಮರುಗು ಭಾಷೆ    ಕನ್ನಡ

ನರ ಜೀವನವು    ಅನ್ನ
ಕುಮಾಯಿ ಸ್ಯಾವಿಡಿ    ಊಟ
ಪಚ್ಚಾಮು    ಸಾಂಬಾರು
ಜಿಗಟಾಲ್ಲು ಮಿರುಪುಳ್ಳು    ಅಕ್ಕಿ ರಾಗಿ
ಮ್ಯಾಸಾಮು    ಮಾಂಸ
ಕಾಸಲು     ಮೀನು
ಕಂಚಗಾಲು     ಹಣ
ನಲ್ಲ ನೀಳ್ಳು    ಸಾರಾಯಿ
ಮೀಟಾಮು    ಉಪ್ಪು
ಯರಮಂಡ    ಈರುಳ್ಳು
ಸೇಗ್ತಾ ಉಂಡಾಡು    ಹೋಗುತ್ತಿದ್ದಾನೆ
ಎಲ್ಕೋಡು ಕಾಪೋಡು     ಗೌಡ
ಸುಲ್ಲ    ಹುಡುಗಿ
ಸಿರಪ್ ಗಾಡು, ವಂಕಾಡು    ಗಂಡಸು
ಸಿರ್ಕಾ, ಮಸ್ ಕೋಟಿ     ಹೆಂಗಸು
ಸುಂಟಿ ಕಾಯಿ    ನಪುಂಸಕ
ನಾಗನ ನಚ್ಕೊ     ಸುಮ್ಮನಿರು
ಕೈಫ್ಕೋ ತಿನ್ನು

ಕುಪ್ಪೆ ನಾಗರಾಜ್