ಟಿ ವಿ ಗೋಪಾಲಕೃಷ್ಣ ಕಂಡಂತೆ ದೊಂಬಿದಾಸ

ರಾತ್ರಿ ರಾಜರ ಬೆಳಗಿನ ಕಣ್ಣೀರ ಕಥೆ

ನಮ್ಮ ಕನ್ನಡ ನಾಡಿನ ಹಿರಿಯ ಜೀವಿಗಳಿಗೆ ನಮ್ಮನ್ನು ಸಾಕಷ್ಟು ಈ ಹಿಂದೆ ಮನರಂಜಿಸಿದ್ದ ಒಂದು ಜನಾಂಗದ ಬಗ್ಗೆ ಹೆಚ್ಚಿನವರಿಗೆ ಪರಿಚಯವಿದ್ದೆ ಇರುತ್ತದೆ. ತಮ್ಮ ನೋವುಗಳನ್ನು ಮರೆಸಿದ್ದ, ತಮ್ಮ ಹಿಂದೂ ಧರ್ಮದ ಅಧ್ಯಾತ್ಮದ ಶೋಧ ಮಾಡಿದ ನೆಲಮೂಲ ನಾಟಕಕರಾಗಿ ಹಾಗೂ ತಮ್ಮ ಬದುಕಿಗೆ ಲಾವಣಿಗಳ ಮೂಲಕ ಮಾರ್ಗದರ್ಶನ ಮಾಡಿದ್ದ ದೊಂಬಿದಾಸ ಜನಾಂಗವನ್ನು ನಮ್ಮ ಹಿರಿಯರು ಮರೆತಿರಲು ಸಾಧ್ಯವಿಲ್ಲ . ನನ್ನ ಈ ಲೇಖನದ ಮೂಲಕ ಕರ್ನಾಟಕದ ಜನರನ್ನು ರಂಜಿಸಿದ ನಮ್ಮದೇ ಜೀವನದ ಭಾಗವಾಗಿದ್ದ ಈ ಕಲಾವಿದರನ್ನು ಸ್ಮರಿಸುವ ಕಾರ್ಯವೆಂದು ಕೊಂಡಿದ್ದೇನೆ.

ದೊಂಬಿದಾಸ ಜನಾಂಗವು ಹಲವಾರು ಶತಮಾನಗಳಿಂದ ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಕಲಾ ಸೇವೆಯಲ್ಲಿ ತೊಡಗಿದ್ದು ನಟನೆಯನ್ನೇ ತಮ್ಮ ಮುಖ್ಯ ಕಸುಬಾಗಿಸಿಕೊಂಡಿದ್ದ ಜನಾಂಗ. ಈ ವೃತ್ತಿ ಅಲ್ಲದೆ ಮತ್ಯಾವ ವೃತ್ತಿ ಅರಿಯದ ಈ ಜನಾಂಗ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದೆ.

ಜಗತ್ತಿನಲ್ಲಿ ಕೆಲವು ಕುಟುಂಬಗಳು ಕಲಾ ಸೇವೆಯನ್ನು ತಮ್ಮ ಕಸುಬನ್ನಾಗಿಸಿ ಕೊಂಡಿದ್ದಾರೆ. ಎಪ್. ಕಿಟೆಲ್ತಮ್ಮ ಕನ್ನಡ ನಿಘಂಟಿನಲ್ಲಿ ದೊಂಬಿದಾಸ ಪದಕ್ಕೆ ಅರ್ಥವಾಗಿ“ ರಂಗಭೂಮಿ ಕಲಾವಿದರ ಒಂದು ಜನಾಂಗ ” ಎಂದು ದಾಖಲಿಸಿದ್ದಾರೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಸಂಪೂರ್ಣವಾಗಿ ಒಂದು ಜನಾಂಗ ರಂಗಭೂಮಿ ಕಲಾವಿದರಾದ ಉದಾಹರಣೆಗಳಿಲ್ಲ, ದೊಂಬಿದಾಸರ ಬಯಲಾಟಗಳ ಪಾತ್ರಗಳಲ್ಲಿ ಅಟ್ಟಹಾಸ, ಅಬ್ಬರ, ಹೂಂಕಾರ ಹೆಚ್ಚು ಕಂಡುಬರುವುದರಿಂದ ದಾಸರ ಜನಾಂಗವನ್ನೇ ದೊಂಬಿದಾಸರೆಂದು ಕರೆಯಲ್ಪಟ್ಟಿರ ಬಹುದಾಗಿದೆ. ದೊಂಬಿದಾಸ ಜನಾಂಗದ ಪ್ರತಿಯೊಬ್ಬ ವ್ಯಕ್ತಿಯು ಕಲಾ ಸೇವೆಯನ್ನೇ ತನ್ನ ಬದುಕನ್ನಾಗಿಸಿಕೊಂಡು ಬದುಕು ಸವೆಸಿದ್ದು ಇವರ ವೈಶಿಷ್ಟ್ಯವೇ ಆಗಿದೆ.

ದೊಂಬಿದಾಸ ಜನಾಂಗವು ಹಿಂದೂ ಧರ್ಮದ ಮಹೋನ್ನತ ಗ್ರಂಥಗಳಾದ ರಾಮಾಯಣ ಮಹಾಭಾರತಗಳನ್ನು ಮನೆಮನೆಗೆ ತಲುಪಿಸಿದ ಕಾರ್ಯಕ್ಕೆ ಶ್ಲಾಘನೀಯರಾಗಿರುತ್ತಾರೆ. ಇವರ ಆಡುತ್ತಿದ್ದ ನಾಟಕಗಳಾದ ರಾಜಾ ಸತ್ಯವ್ರತ, ಶ್ರೀಗೌರಿಯ ಮದುವೆ, ಗಂಗೆಗೌರಿ ಸವಾಲು, ಕೃಷ್ಣ ಕೊರವಂಜಿ, ಸತ್ಯ ಹರಿಶ್ಚಂದ್ರ, ಮಾರ್ಕಂಡೇಯ ಸತ್ಯ ಭೋಜ, ಗಿರಿಜಾ ಕಲ್ಯಾಣ, ಕರಿಬಂಟನ ಕಾಳಗ ಇವು ಇವರ ಪ್ರಸಿದ್ಧ ದಾರ್ಮಿಕ ನಾಟಕಗಳಾಗಿವೆ. ದೊಂಬಿದಾಸರು ಇತಿಹಾಸ ಪುರುಷರ ಬಗ್ಗೆಯು ಲಾವಣಿಗಳನ್ಮು ರಚಿಸಿದ್ದಾರೆ, ಮಾಗಡಿ ಕೆಂಪೇಗೌಡರ ಬಗ್ಗೆ ರಚಿಸಿದ ಲಾವಣಿಗಳು ಲಭ್ಯವಿವೆ. ಈ ಲಾವಣಿಗಳಿಂದ ಮಾಗಡಿ ಕೆಂಪೇಗೌಡರ ಒಂದಷ್ಟು ವಿಚಾರಗಳ ಬಗ್ಗೆ ತಿಳಿಯಲು ಸಹಾಯವಾಗ ಬಹುದಾಗಿದೆ.

ದೊಂಬಿದಾಸರು ನಾಟಕಗಳನ್ನೇ ಬದುಕಾಗಿಸಿಕೊಂಡು ಹಿಂದೂ ಧರ್ಮದ ಪ್ರಸಾರಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಬದುಕು ಸಾಗಿಸಿದವರು. ಶ್ರೀಮಂತಿಕೆಯ ಕುರುಹುಗಳಾದ ಹೊಲ ಗದ್ದೆ ಮನೆಗಳ ದಾಸರಾಗದೆ ಕಲೆಯ ದಾಸರಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರು. ಕಹಿಯನ್ನೇ ಬದುಕಲ್ಲಿ ಪಡೆದ ಈ ಕಲಾವಿದರು ರಾತ್ರಿಗಳಲ್ಲಿ ಜನರಿಗೆ ತಮ್ಮ ಕಲಾ ಸಂಪತ್ತಿನಿಂದ ಸಿಹಿಯನ್ನು ಕೊಟ್ಟವರು. ರಾತ್ರಿಗಳಲ್ಲಿ ರಾಜರಾಗಿ ವಿಜೃಂಭಿಸುತ್ತಿದ್ದ ಕಲಾವಿದರು ಬೆಳಗಾಗುತ್ತಲೇ ಭಿಕ್ಷುಕರಾಗಿ ಬಿಡುತ್ತಿದ್ದ ದುರಂತವಿದು.

ದಾಸರ ಗುಂಪಿಗೆ ಸೇರಿದ ವೃತ್ತಿಗಾಯಕರಲ್ಲಿ ಅತಿ ಮುಖ್ಯರು ಮತ್ತು ಜನಪ್ರಿಯರಾದವರು ದೊಂಬಿದಾಸರು. ಇವರು ಆಂಧ್ರದ ಕಡೆಯಿಂದ ಕರ್ನಾಟಕಕ್ಕೆ ವಲಸೆ ಬಂದ ಒಂದು ಅಲೆಮಾರಿ ಜನಾಂಗವೆನ್ನುವುದಕ್ಕೆ ಇವರು ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುವ ತೆಲುಗು ಭಾಷೆಯೇ ಸಾಕ್ಷಿ. ಆದರೆ ಇವರು ಕನ್ನಡ ನೆಲದಲ್ಲಿಯೇ ನೆಲೆ ನಿಂತು ಕನ್ನಡ ಜಾನಪದ ಬದುಕಿನ ರೀತಿಯಲ್ಲಿ ಬೆರೆತು ಹೋದವರು. ಬಯಲಾಟ ಸಣ್ಣಾಟಗಳು ರೂಪುಗೊಳ್ಳುತ್ತಿದ್ದ ಕಾಲದಲ್ಲಿ ದೊಂಬಿದಾಸರು ನಾಟಕ ಕಲೆಯನ್ನೇ ತಮ್ಮ ವೃತ್ತಿಯನ್ನಾಗಿಸಿ ಕೊಂಡು ನೆಟ್ಟನ್ನ ಮೂಗು, ಬಟ್ಟಲು ಗಣ್ಣಿನ ಯುವಕರು ಸ್ತ್ರೀ ವೇಷ ಧರಿಸಿ, ಏಕತಾರಿ ನುಡಿಸುತ್ತಾ ಕಾಲಿಗೆ ಗೆಜ್ಜೆ ಕಟ್ಟಿ ಬೆಡಗಿನಿಂದ ಕುಣಿದು ಭಕ್ತಪ್ರಹ್ಲಾದ ಭಕ್ತಮಾರ್ಕಂಡೇಯ ಭಕ್ತ ಹನುಮಂತ ಮೊದಲಾದ ಪೌರಾಣಿಕ ಕಥೆಗಳು ಬಾಲ ನಾಗಮ್ಮ ಪೋತರಾಜ ಮೊದಲಾದ ಜಾನಪದ ಕತೆಗಳನ್ನು ರೋಚಕವಾಗಿ ಪ್ರಸ್ತುತಪಡಿಸಿ, ಜನಮನ ರಂಜನೆ ಮಾಡುತ್ತಿದ್ದ ಇವರನ್ನು ಹೆಣ್ಣುವೇಷಧಾರಿಗಳು ಎಂದು ಕರೆಯುತ್ತಿದ್ದರು. ದೊಂಬಿದಾಸರಲ್ಲಿ ಈ ರೀತಿ ವೇಷ ಹಾಕುವವರಿಗೆ ಕುಣಿತ, ಬಿನ್ನಾಣಗಳಂತೂ ಸರಿಯೇ. ಆದರೆ ಇಂಪಾಗಿ ಹಾಡುವುದು ಅಗತ್ಯವಾಗಿರುತ್ತಿತ್ತು ,ದೊಂಬಿದಾಸ ಜನಾಂಗದ ಕಲಾವಿದರೆಲ್ಲರೂ ಮದುರ ಸ್ವರದ ಕಲಾವಿದರೇ ಹಾಗಿರುತ್ತಿದ್ದುದು ಅವರ ವೈಶಿಷ್ಟ್ಯವಾಗಿದ್ದಿತ್ತು. ಇವರಲ್ಲಿ 10 ರಿಂದ 15 ಜನರವರೆಗೆ ವೇಷಧಾರಿಗಳು, ಅದರಲ್ಲಿ ಒಬ್ಬ ಮುಖ್ಯವಾಗಿ ಕಥಾ ನಿರೂಪಕ. ಕಾಲ ಕ್ರಮದಲ್ಲಿ ಗೆಜ್ಜೆ ಕಟ್ಟಿ ಕುಣಿಯುವುದು ತಪ್ಪಿ ಕೇವಲ ಹಾಡುವುದನ್ನೇ ಇವರು ತಮ್ಮ ವೃತ್ತಿಯ ಪ್ರಮುಖ ಅಂಶವಾಗಿ ಬೆಳೆಸಿಕೊಂಡು ಬಂದರು.

ದೊಂಬಿ ದಾಸರ ಬಯಲಾಟ, ಲಾವಣಿಗಳು ನೆಲ ಮೂಲದಿಂದಲೇ ಹುಟ್ಟಿದ್ದು , ಸ್ಥಳೀಯ ಜ್ಞಾನವನ್ನು ಸಂಕೇತಿಸುತ್ತವೆ. ದೊಂಬಿ ದಾಸರ ಲಾವಣಿಗಳು ಉಪದೇಶ ರೂಪದಲ್ಲಿದ್ದು ಸುಂದರ ಸ್ವಚ್ಛಂದ ಜೀವನ ರೂಪಿಸಿಕೊಳ್ಳಲು ಮೌಲ್ಯ ವಿವೇಕ ಮತ್ತು ಆದರ್ಶಗಳನ್ನು ಕಲಿಸುತ್ತವೆ ದೊಂಬಿ ದಾಸ ಬಯಲಾಟಗಳಲ್ಲಿ, ಲಾವಣಿಗಳಲ್ಲಿ ಸ್ತ್ರೀ ಪರ ಮತ್ತು ಲಿಂಗಾತೀತವಾದ ರಚನೆಗಳನ್ನು ಕಾಣಬಹುದು ಇವುಗಳನ್ನು ಜಾಗ್ರತೆಯಾಗಿ ಅಭ್ಯಸಿಸುವುದರ ಮೂಲಕ ಲಿಂಗತಾರತಮ್ಯ ದನಾಶಕ್ಕೆ ಬೇಕಾದ ಬಲಿಷ್ಟವಾದ ಚರಿತ್ರೆಗೆ ಪೂರಕವಾಗಬಹುದು. ದೊಂಬಿದಾಸರ ಸತ್ಯ ಭೋಜರಾಜ ಒಂದು ಗಮನಾರ್ಹ ಲಾವಣಿ. ಈ ಕಾವ್ಯ ಸುಪ್ರಸಿದ್ಧ ಆಶಯಗಳಿಂದ ಬೆಳವಣಿಗೆ ಹೊಂದಿದ್ದರೂ ವಿಶೇಷ ಕಥನ ಪರಿಸರದಿಂದಾಗಿ ಶ್ರೇಷ್ಠನೀಯವಾಗಿದೆ. ಸತ್ಯ ಭೋಜರಾಜ ಲಾವಣಿಯ ಈ ಕೆಳಗಿನ ಸಾಲುಗಳನ್ನು ಮೇಲಿನ ಸಾಲುಗಳು ದೃಡಪಡಿಸುತ್ತವೆ. ಈ ಲಾವಣಿಯಲ್ಲಿ ಶಿವ ಗಂಡು ಫಲಕೊಟ್ಟರೂ, ತೌರಿಗೆ ಬೆಳಕಾಗುವ ಹೆಣ್ಣುಬೇಕೆಂದು ಕೇಳುವುದು ಇಲ್ಲಿನ ಒಂದು ವೈಶಿಷ್ಟ್ಯ .

ಕೇಳಪ್ಪ ಸಂಕಲ್ಪ
ನಿನ್ನ ಭಕ್ತಿಗೆ ಮೆಚ್ಚಿರುವೆ
ನಿನ್ಗೆ ಗಂಡು ಮಗನ ಫಲವ ಕೊಟ್ಟಿವ್ನಿ
ಸುಖವಾಗಿ ಬಾಳೋಗಪ್ಪ
ಮಾ ಲಕ್ಷ್ಮಿ ತಾಯಮ್ಮ
ಅಲ್ಲೇನಂತ ಹೇಳುತಾಳೆ
ಸ್ವಾಮಿ- ಗಂಡು ಮಗನ ಕೊಟ್ಟೀರಿ
ಅದು ಗಣಸಿನ ಪಾಲಾಗುತೈತೆ
ತವರೂರ್ಗೆ ಜ್ಯೋತಿಯಾಗುವಂತ
ಹೆಣ್ಣು ಮಗಳ ಕೊಡಿಸಪ್ಪ
ಬಂಜೆಂಬಸೊಲ್ಲ ಬಿಡಿಸಪ್ಪ

( ಸತ್ಯ ಭೋಜರಾಜ ಲಾವಣಿಯ ಕೆಲವು ಸಾಲುಗಳು )

ದೊಂಬಿದಾಸರ ಮತ್ತೊಂದು ಪ್ರಖ್ಯಾತ ಪೌರಾಣಿಕ ಲಾವಣಿ ಗಂಗೆಗೌರಿ .ಈ ಲಾವಣಿಯಲ್ಲಿ ದೇವತೆಗಳು ಸಾಮಾನ್ಯರ ಲೋಕಕ್ಕೆ ಬಂದು ಸಾಮಾನ್ಯ ವ್ಯಕ್ತಿಗಳಾಗುತ್ತಾರೆ, ಜಗಳವಾಡುತ್ತಾರೆ, ವಿನೋದವಾಡುತ್ತಾರೆ ಮತ್ತು ಬಾಳುತ್ತಾರೆ. ಈ ಲಾವಣಿಯ ಮತ್ತೊಂದು ವಿಶೇಷವೆಂದರೆ ಶಿವನು ಗೌರಿ ಹಾಗೂ ಗಂಗೆಯರಿಗೆ ಆಶ್ರಯ ನೀಡಿದವ, ಪ್ರಾಣಿಗಳ ಜೊತೆಗೆ ಚಂದ್ರನಿಗೂ ತನ್ನಲ್ಲಿ ನೆಲೆ ನೀಡಿದವ. ಈ ಲಾವಣಿಯಲ್ಲಿ ಶಿವ ಗೌರಿಯನ್ನು ಮೊದಲು ವಿವಾಹವಾದರೆ ನಂತರ ಗಂಗೆಯನ್ನು ವಿವಾಹವಾಗುತ್ತಾನೆ. ಈ ಲಾವಣಿಯಲ್ಲಿ ಗೌರಿಯನ್ನು ಭೂಮಿಯಂತಲು ಗಂಗೆಯನ್ನು ನೀರು ಅಂತಲೂ ಹೋಲಿಕೆ ಮಾಡುತ್ತಾ ವಿಶಿಷ್ಟವಾಗಿ ಕತೆ ಹೇಳಲಾಗುತ್ತದೆ. ಗೌರಮ್ಮ ದೊಡ್ಡವಳೇ ಆದರೂ ಶಿವನ ಮಡದಿಯೇ ಆದರೂ, ಗಂಗೆ ಇರದೆ ಅವಳು ನೆಮ್ಮದಿಯಾಗಿ ಇರಲಾರರು. ಜಗತ್ತಿನಲ್ಲಿ ನೀರಿಗೆ ಬೇರೆ ಯಾವ ಪರ್ಯಾಯವೂ ಇಲ್ಲ ನೀರಿಲ್ಲದೆ ತನ್ನ ಗುಟ್ಟಿನ ಮೈಲಿಗೆಯನ್ನು ಕಳೆದು ಕೊಳ್ಳಲಾಗದು ಗೌರಿ ಪರಿತಪಿಸಿದಾಗ ಕೊನೆಗೆ ಶಿವಗಂಗೆಯ ಮಹತ್ವವನ್ನು ಹೇಳಿ ಅವಳೊಂದಿಗೆ ರಾಜಿ ಮಾಡಿಸುತ್ತಾನೆ. ಗಂಗೆ ಗೌರಿಯರು ತಮ್ಮ ಪೌರಾಣಿಕ ದೇವತಾಪರಿವೇಶಗಳನ್ನು ಕಳಚಿಕೊಂಡು ನಮ್ಮ ಸುತ್ತಮುತ್ತಣ ಬದುಕಿನಲ್ಲಿರುವ ಸಾಮಾನ್ಯ ಹೆಣ್ಣುಮಕ್ಕಳಂತೆಯೇ


ಜಡೆ ಜಡೆ ಹಿಡಕೊಂಡು ಜಗಳವಾಡಿದರೂ
ಹೊಸ ಸೆರಗ ಹಿಡಕೊಂಡು ವೈರವಾಡಿದರು
ಮುಂದಲೆ ಹಿಡಕೊಂಡು ತರದಾಡಿದರೂ
ಎರಡ ಮೂರು ಪೆಟ್ಟು ಹೊಡದಾಳ ಗೌರಿ
ಬ್ಯಾಟೀಗೆ ಹೋದವನ ಬೆನ್ನತ್ತಿ ಬಂದೆ
ಕೂಡಿ ನೀಬಂದಿ ಕುಲಗೆಟ್ಟ ಗಂಗೀ
(ಗಂಗೆ ಗೌರಿ ಲಾವಣಿಯ ಕೆಲವು ಸಾಲುಗಳು)

ಹೀಗೆ ಮುಂದುವರಿದು ಕೊನೆಗೆ ನೀರಿನ ಬರ ಗೌರಿ ಗಂಗೆ ಹತ್ತಿರ ಬರುವುದು, ಇಬ್ಬರೂ ರಾಜಿಯಾಗಿ ಕೂಡಿ ಒಗತನ ನಡೆಸುವುದು ವಿವರವಾಗಿ ಮೂಡುತ್ತದೆ. ದೊಂಬಿದಾಸರು ಏಕತಾರಿಯನಾದ ತರಂಗದಲ್ಲಿ ತಮ್ಮ ಇಂಥ ಹಾಡುಗಳನ್ನು ಬೆರೆಸಿ ತಾಸುಗಟ್ಟಲೆ ಹಾಡುವಾಗ ಜನಬೆರಗು ಗಣ್ಣುಗಳಿಂದ ಕೇಳುತ್ತಿದ್ದರು .

ಇಂದು ಯಕ್ಷಗಾನ ಪ್ರಪಂಚಾದ್ಯಂತ ಮನ್ನಣೆ ಗಳಿಸಿಕೊಂಡಿದೆ. ಬಯಲಾಟದ ಯಕ್ಷಗಾನವನ್ನು ಮೂಲತಃ ಕರ್ನಾಟಕಕ್ಕೆ ತಂದವರೇ ದೊಂಬಿದಾಸ ರೆಂದು ಡಾ।। ಎಚ್.ಎಲ್. ನಾಗೇಗೌಡ ಅಭಿಪ್ರಾಯಪಡುತ್ತಾರೆ. ದೊಂಬಿದಾಸರು ಏಕತಾರಿಯನ್ನು ಹಿಡಿದು ಹಾಡಿಕೊಂಡು ಬರುವ, ಕರ್ನಾಟಕದ ಪ್ರಸಿದ್ಧ ಜನಪದ ಕಲಾವಿದರು 'ಹೆಣ್ಣು ವೇಷದವರು' ಎಂದು ಕರೆಯಲ್ಪಡುವ ಇವರು ಮೊದಲಿಗೆ ಬಯಲಾಟಗಳಿಗೆ ಹೆಸರಾಗಿದ್ದವರು ಎಂದು ಪ್ರಖ್ಯಾತ ಜಾನಪದ ವಿದ್ವಾಂಸ ಜೀ. ಶಂ. ಪರಮಶಿವಯ್ಯ ಅಭಿಪ್ರಾಯ ಪಡುತ್ತಾರೆ. ಮಾರ್ಥಬುಶ್ಆಶ್ಟನ್ಅಮೆರಿಕದ ವಿದ್ವಾಂಸರು ತನ್ನ ಪಿಎಚ್ಡಿ ಪ್ರಬಂಧದಲ್ಲಿ ಯಕ್ಷಗಾನದ ಉಗಮದ ಬಗ್ಗೆ ತಿಳಿಸಿರುತ್ತಾರೆ. ಯಕ್ಷಗಾನವನ್ನು ಹಲವು ಹೆಸರುಗಳಿಂದ ಗುರುತಿಸುತ್ತಿದ್ದರು. ಪ್ರತಿ ಹೆಸರುಗಳು ಕಲೆಯ ವಿಚಾರಗಳನ್ನು ತನ್ನ ಹೆಸರಿನಿಂದಲೇ ತಿಳಿಯ ಪಡಿಸುತ್ತಿತ್ತು. ನಮ್ಮ ಪೂರ್ವಜರು“ ದಶಾವತಾರ ”ಎನ್ನುವ ಕಲೆಯ ಪ್ರದರ್ಶನವನ್ನು ನೋಡಿ ಆಶ್ಚರ್ಯ ಚಕಿತರಾಗುತ್ತಿದ್ದರು. ನಂತರ ಆ ಕಲೆ“ ಭಾಗವತರ ಆಟ ” ಎಂದೆನಿಸಿದರೆ, ನಂತರದ ದಿನಗಳಲ್ಲಿ ಆ ಕಲೆಕರಿ ಬಂಟನ ಕಾಳಗ (The fight of the block worriors ) ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು. ನಂತರ ಈ ಕಲೆಯು ದೊಂಬಿದಾಸರ ಕುಣಿತ( Antics of the masked Rioters) ಎಂಬ ಹೆಸರು ಪಡೆಯಿತು. ಅತ್ಯಂತ ಸಹಜವಾಗಿ ಈ ಕಲೆಯನ್ನು ಪರ್ಯಾಯವಾಗಿ “ಬಯಲಾಟ“ ಎಂಬ ಹೆಸರಿನಿಂದ ಕರೆಯಲಾಯಿತು. ಕೊನೆಯಲ್ಲಿ ವಿಶ್ವಾದ್ಯಂತ“ ಯಕ್ಷಗಾನ“ ಎಂಬ ಹೆಸರಿನಿಂದ ಮನ್ನಣೆಯನ್ನುಗಳಿಸಿ ಕೊಳ್ಳುತ್ತಲಿದೆ.

ದೊಂಬಿದಾಸರು ವಿಜಯನಗರ ಸಾಮ್ರಾಜ್ಯ ದೊಡನೆ ಸಂಬಂಧವಿರಿಸಿಕೊಂಡಿದ್ದವರು. ವಿಜಯನಗರ ಸಾಮ್ರಾಜ್ಯದ ಪತನವಾದ ಬಳಿಕ ವಿಜಯನಗರ ಸಾಮ್ರಾಜ್ಯ ದೊಡನೆ ಉತ್ತಮ ಸಂಬಂಧವಿದ್ಧ ಪಾಳೆಗಾರರ ಅಥವ ರಾಜರ ಕಡೆಗೆ ಅಲೆಮಾರಿಗಳಾಗಿ ವಲಸೆ ಬಂದಿರಬಹುದೆಂಬ ನಂಬಿಕೆ ಇದೆ. ಅದಕ್ಕೆ ಪೂರಕವಾಗಿ ಮಾಗಡಿ,ಮೈಸೂರು,ತುಮಕೂರು, ಕೋಲಾರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ರಾಯಚೂರು,ಹಾಸನ , ಚಿಕ್ಕಮಗಳೂರು, ರಾಮನಗರ, ಮಂಗಳೂರು, ಕುಂದಪುರ ಭಾಗಗಳಲ್ಲಿ ದೊಂಬಿದಾಸರು ಕಾಣಸಿಗುತ್ತಾರೆ.

ದೊಂಬಿದಾಸ ಜನಾಂಗವು ಇಂದು ನಾಟಕ ಹಾಗೂ ಲಾವಣಿಗಳಿಂದ ವಿಮುಖರಾಗಿದ್ದು ಬದುಕಿಗಾಗಿ ದೊಡ್ಡ ಹೋರಾಟವನ್ನೇ ಮಾಡಬೇಕಾಗಿದೆ.ಇಪ್ಪತ್ತೊಂದನೇ ಶತಮಾನದ ಈ ರೂಪಾಂತರ ಕಾಲದ ತಳಮಳ ಮತ್ತು ಗೊಂದಲಗಳು ಎಲ್ಲರನ್ನೂ ಕಾಡಿದಂತೆ ದೊಂಬಿದಾಸರ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ವರ್ತಮಾನದ ಸಂಕಟಗಳಿಗೆ ಪ್ರತಿರೋಧಒಡ್ಡದೆತನ್ನಶಕ್ತಿಯಾಗಿದ್ದ ನಾಟಕ, ಲಾವಣಿಗಳ ರಂಗದಿಂದ ದುರ್ಬಲವಾಗುತ್ತಾ ವಿಸರ್ಜನೆಯಾಗುತ್ತಿರುವುದು ಆತಂಕದ ವಿಷಯ. ಶತಮಾನಗಳಿಂದ ಭೂಒಡೆತನ ಪಡೆಯಲು ಯೋಚಿಸದ ಸಮಾಜ ಭೂ ಒಡೆತನವಿಲ್ಲದೆಇಂದು ಟೆಂಟ್ ಗಳಲ್ಲಿ ಅಲೆಮಾರಿಗಳಾಗಿ ಜೀವನ ನಡೆಸುತ್ತಿದ್ದಾರೆ. ದೊಂಬಿದಾಸ ಸಮುದಾಯವು ಇಂದು ಕೂಡ ಅಲೆಮಾರಿತನಕ್ಕೆ ಸಂಬಂಧಿಸಿದಂತಹ ಕೆಲಸಗಳನ್ನೇ ಆಯ್ದು ಕೊಂಡಿರುವುದು ಸಹಜವೇ ಆಗಿದೆ. ಸೈಕಲ್ಅಥವಾ ನಡಿಗೆಯಿಂದ ಊರೂರು ಅಲೆಯುತ್ತಾ ಸಮುದಾಯವು ಹೆಚ್ಚಾಗಿ ಸ್ಟೇಷನರಿ, ಬೀಗರಿಪೇರಿ, ಸಂಗೀತವಾದಕಗಳ ರಿಪೇರಿ, ಮಾಹಿಳೆಯರ ಕೇಶಾಲಂಕರಕ್ಕೆ ಬಳಸುವ ವಸ್ತುಗಳ ತಯಾರಿಕೆಯಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಕಲೆಯನ್ನು ಬಲ್ಲ ಕೆಲವರು ಕಲೆಯನ್ನು ಹೊಟ್ಟೆ ಪಾಡಿಗಾಗಿ ಬಳಸಿ ಕೊಳ್ಳತ್ತಿದ್ದಾರೆ. ಮಾನವನ ವಲಸೆಗೆ ಬಹುಮುಖ್ಯವಾಗಿ ಬದುಕಿನಲ್ಲಿ ಸಂಕಷ್ಟದ ಕಾರಣಕ್ಕೆ ವಲಸೆಹೋಗುವುದು ಸಹಜ. ದೊಂಬಿದಾಸರ ವಲಸೆಗೆ ಕಲೆಯೇ ಕಾರಣ. ತಾನೊಂದು ಊರು ಸೇರಿದರೆ ಅಂದೇ ಮತ್ತೊಂದು ಊರಿಗೆ ಹೋಗುವ ತಯಾರಿಯೊಂದಿಗೆ ಆ ಊರಿನಲ್ಲಿ ಠಿಕಾಣಿ ಹೂಡುತ್ತಿದ್ದವರು. ದೊಂಬಿದಾಸ ಸಮುದಾಯ ಎಲ್ಲಿಯೂ ನೆಲೆ ನಿಲ್ಲದ ಜನಾಂಗ ತನ್ನ ಬದುಕಿಗಾಗಿ ಭೂಮಿ ವಸತಿಗಳನ್ನು ಪಡೆಯಲು ಸಾದ್ಯವಾಗದೆ ಇಂದು ನಿರ್ಗತಿಕರಂತೆ ಬದಕು ಸಾಗಿಸುತ್ತಿದ್ದಾರೆ. ಕಲೆಯನ್ನೇ ಬದುಕಾಗಿಸಿಕೊಂಡಿದ್ದ ಕಲಾವಿದರು ಎಲ್ಲಾ ಕಾಲದಲ್ಲಿಯೂ ಸಂಕಷ್ಟವನ್ನೇ ಅನುಭವಿಸಿದ್ದಾರೆ. ಸರ್ಕಾರ ದೊಂಬಿದಾಸರ ಜನಾಂಗದ ಕಲಾವಿದರಿಗೆ ವಿಶೇಷ ಆಸಕ್ತಿ ವಹಿಸಿ ಕಲಾವಿದರಿಗೆ ಅವರ ನಿರ್ವಹಣೆಗೆ ಮಾಶಾಸನ, ವಸತಿ , ಭೂ ಒಡೆತನವನ್ನು ಇನ್ನಾದರೂ ನೀಡದಿದ್ದರೆ ಕಲೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದ ಜನಾಂಗ ಸಂಪೂರ್ಣ ನಿರ್ಗತಿಕರಾಗಿ ಬಿಡಬಹುದಾದ ಸಾದ್ಯತೆಗಳೇ ಹೆಚ್ಚು.

ನಾಟಕ ಅಕಾಡೆಮಿಯವರು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಗುರುತಿಸಿ, ಶಿಬಿರ ನಡೆಸುವ ನಾಟಕ ಪ್ರದರ್ಶನ ಏರ್ಪಡಿಸುವ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದೆ. ಆದರೆ ದೊಂಬಿದಾಸ ಜನಾಂಗವು ಹಿಂದುಳಿದ ವರ್ಗ (ಪ್ರವರ್ಗ ಒಂದರಲ್ಲಿ ) ಪಟ್ಟಿಯಲ್ಲಿ ಇರುವುದರಿಂದ ಜನಾಂಗದ ಕಲಾವಿದರು ಅವಕಾಶ ವಂಚಿತರಾಗಿದ್ದು ಸರಕಾರ ದೊಂಬಿದಾಸ ಸಂಪ್ರದಾಯಕಲಾವಿದರಿಗೂ ವಿಶೇಷ ಅವಕಾಶಗಳನ್ನು ಕಲ್ಪಿಸಿ ಕೊಡಬೇಕಾಗಿದೆ.

ಶ್ರೀ ಜಿ ಎಸ್ ಶಿವರುದ್ರಪ್ಪನವರು ಹೇಳಿದಂತೆ " ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ,ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೇ ಬಹುಮಾನ ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ" ಸಂಪೂರ್ಣವಾಗಿ ಈ ಕವಿತೆಯ ಆಶಯದಂತೆ ಬದುಕಿದ ದೊಂಬಿ ದಾಸರಿಗೆ ಸರ್ಕಾರಗಳು ನೀಡುವ ಯಾವುದೇ ಅನುದಾನ, ಆರ್ಥಿಕ ಸಹಾಯಗಳನ್ನು ಪಡೆಯಬೇಕೆಂಬ ಕಡೆಗೆ ಅಂದು ಜನಾಂಗ ಆಸಕ್ತಿ ವಹಿಸಲಿಲ್ಲ , ಇಂದು ಒಂದಷ್ಟು ವಿದ್ಯಾಭ್ಯಾಸವನ್ನು ಪಡೆದಿರುವ ಯುವಕರು ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಕನ್ನಡ ಸಂಸ್ಕೃತಿ ಇಲಾಖೆಗಳಿಗೆ ಅಲೆದು ಯಾವುದೇ ಪ್ರಯೋಜನವಾಗದೆ ಕೈಚೆಲ್ಲಿ ಕುಳಿತು ಬಿಟ್ಟಿದ್ದಾರೆ.

ಇಂದಿನ ಪ್ರಜಾ ತಂತ್ರದ ದಿನಗಳಲ್ಲಿ ಚಿಕ್ಕ ಚಿಕ್ಕ ಸಮಾಜಗಳು ತಮ್ಮ ಬಳಿಯ ಕಡಿಮೆ ಮತದ ಕಾರಣಕ್ಕಾಗಿ ತಾರತಮ್ಯವನ್ನು ಅನುಭವಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ, ಬಲಿಷ್ಟ ಹಿಂದುಳಿದ ಜನಾಂಗಗಳ ಜೊತೆ ನಿಲ್ಲಲಾಗದೆ ನಲುಗಿ ಹೋಗಿವೆ. ಸಮುದಾಯದ ಜನರು ಒಂದೇಕಡೆ ನೆಲೆನಿಲ್ಲದೆ ಕರ್ನಾಟಕದಾದ್ಯಂತ ಚದುರಿ ಹೋಗಿರುವ ಜನ ಅಲ್ಪಸಂಖ್ಯಾತರಾಗಿರುವ ಕಾರಣಕ್ಕಾಗಿ ತಮ್ಮ ಜನಾಂಗದ ಹೆಸರನ್ನೇ ಹೇಳಿಕೊಳ್ಳದೆ ಮತ್ತಷ್ಟು ಅಸಂಘಟಿತರಾಗುತ್ತಿದ್ದಾರೆ. ದ್ವನಿಯಿಲ್ಲದಂತಹ ಅಲೆಮಾರಿ ದೊಂಬಿದಾಸರು ಈ ರೀತಿಯ ತಬ್ಬಲಿತನ, ತಾರತಮ್ಯ, ಅನುಭವಿಸಬೇಕಾದ ದುರ್ಗತಿ ಬಂದಿದೆ!

ಟೆಂಟ್ಗುಡಿಸಲುಗಳನ್ನು ಮನೆಯನ್ನಾಗಿಸಲು ಸಾದ್ಯವಾಗದೆ ಇನ್ನು ತೀರಾ ಕಷ್ಥಕರ ಜೀವನವನ್ನು ನಡೆಸುತ್ತಿದ್ಧಾರೆ. ಜೀವನ ನಿರ್ವಹಣೆಗೆ ಕಷ್ಟ ಸಾದ್ಯಾವಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಪರದಾಡುವ ಸ್ಥಿತಿ ಇದೆ. ದೊಂಬಿದಾಸ ಅಲೆಮಾರಿಗಳಿಗೆ ಅಸ್ಮಿತೆಯ ಗೊಂದಲವಿದೆ, ಈ ಕಾರಣಕ್ಕೆ ಇವರಿಗೆ ಅಲೆಮಾರಿ ದೊಂಬಿದಾಸ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ. ಸರ್ಕಾರ ಕೊಡ ಮಾಡುವ ಸಾಲಸೌಲಭ್ಯಗಳಲ್ಲಿ ಕೂಡ ದೊಂಬಿದಾಸ ಜನಾಂಗದವರಿಗೆ ಯಾವುದೇ ಅನುಕೂಲವಾಗಿಲ್ಲ. ಇವರ ಇರುವಿನ ಜಾಗಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿಲ್ಲ. ಈ ಹಿನ್ನೆಲೆಯಲ್ಲಿ ನಿಜಕ್ಕೂ ಅಲೆಮಾರಿ ಆಯೋಗವೊಂದರ ಅವಶ್ಯತೆಯಿದೆ..

ದೊಂಬಿದಾಸ ಸಮಾಜದ ಶ್ರೀಮಂತ ಕಲಾ ಪ್ರಕಾರಗಳನ್ನು ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದ್ದು ಈಗ ಉಳಿದಿರುವ ಕನಿಷ್ಠ ನಾಟಕ, ಲಾವಣಿಗಳಕಲೆ, ಸಂಸ್ಕೃತಿ ಮತ್ತು ಜ್ಞಾನಪರಂಪರೆಗಳು ಅಳಿಸಿ ಹೋಗದಂತೆ ಮಾಡಲು ಹಾಗೂ ಅವುಗಳ ಸಂರಕ್ಷಣೆ ಹಾಗೂ ಸಂವರ್ಧನೆ ಸಂರಕ್ಷಿಸುವ ಕಾರ್ಯ ಸರ್ಕಾರದಿಂದ ಆಗಬೇಕಿದೆ.

ಕಲಾಸಂಸ್ಕೃತಿ ಉಳ್ಳ ಅಲೆಮಾರಿಗಳು ಯಾರೇ ಇರಲಿ , ಅವರ ಸಂಸ್ಕೃತಿಯ ಮತ್ತು ಬೃಹತ್ತಗಳ ಸಂಪೂರ್ಣ ಕಲ್ಪನೆ ಅವರಿಗಿರುವುದುಶಕ್ಯವಲ್ಲ. ಏಕೆಂದರೆ ತಮ್ಮದು ಅಂತ ಮಹತ್ವದ ಬದುಕಲ್ಲ, ಎಂಬ ಒಂದು ಬಗೆಯ ಕೀಳರಿಮೆ ಅವರಿಗೆ ಸಾಮಾನ್ಯವಾಗಿರುವುದು ಮತ್ತು ಯಾವುದನ್ನು ತಾವೇ ಮುಂದೆ ಬಂದು ತೋರ್ಪಡಿಸಿಕೊಳ್ಳದ ಸಂಕೋಚ ಸ್ವಭಾವವಿರುವುದು ಜಾನಪದರಿಗೆ ಸಹಜ ಜಾಯಮಾನ . ದೊಂಬಿದಾಸ ಜನಾಂಗದ ಸಾಹಿತ್ಯ ಸಂಸ್ಕೃತಿಗಳನ್ನು ಜನಾಂಗದವರೇ ಸಂರಕ್ಷಿಸಿ ಪೋಷಿಸುವುದು ಆಗದ ಮಾತು. ಅದಕ್ಕೆ ಅನೇಕ ಕಾರಣಗಳಿರಬಹುದು, ಕೆಲವರು ನಾಗರಿಕರಿಗೆ ಹಾಗೂ ವಿದ್ಯಾವಂತರಾದ ಪ್ರತಿಷ್ಠಿತರಿಗೆ ಹೊರನೋಟಕ್ಕೆ ಒರಟೊರಟಾಗಿ, ಅಬದ್ಧವಾಗಿ ಸಂಸ್ಕೃತಿ ಸಾಹಿತ್ಯ ಕಲೆಗಳನ್ನು ಹಾಗೆ ಹಾಗೆಯೇ ಅವರಿಗೆ ಪರಿಚಯ ಮಾಡಿಕೊಟ್ಟರೆ ನಾಗರಿಕರ ಮನ್ನಣೆಗಳಿಸುವುದು ದುಸ್ತರ. ಬದಲಿಗೆ ಅವರಿಗೆ ತಕ್ಕ ರೀತಿಯಲ್ಲಿ ಆಕರ್ಷಕವಾಗಿ ಈ ವಸ್ತುಸಂಗತಿಗಳನ್ನು ಸಮರ್ಪಿಸುವ ಕೌಶಲವನ್ನು ಬಲ್ಲ ವಿದ್ಯಾವಂತ ಕಲಾಸಕ್ತರು ಅಸ್ಥೆವಹಿಸಿದರೆ ಈ ಜನಾಂಗದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪವಾಡ ಸದೃಶ ಘಟನೆಯಾಗಿ ಪರಿಣಮಿಸಲಿದೆ

ಟಿ ವಿ ಗೋಪಾಲಕೃಷ್ಣ